ಬದಿಯಡ್ಕ : ಕೇರಳ ರಾಜ್ಯ ಸರಕಾರದ ಮಲಯಾಳ ಭಾಷಾ ಸುಗ್ರೀವಾಜ್ಞೆಯ ವಿರುದ್ಧ ಪ್ರತಿಭಟಿಸಲು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆಯು ಶುಕ್ರವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಮಾತನಾಡಿ ಕನ್ನಡ ನಮ್ಮ ಹಕ್ಕಾಗಿದೆ. ಕಡ್ಡಾಯ ಮಲಯಾಳ ಭಾಷೆಯ ಹೇರಿಕೆಯ ವಿರುದ್ಧ ನಾವೆಲ್ಲ ಸೆಟೆದು ನಿಂತು ಒಗ್ಗಟ್ಟಿನಿಂದ ಪಕ್ಷಬೇಧ ಮರೆತು ನಾವು ಕನ್ನಡಗಿರು ಎಂದು ಧೀರರಾಗಿ ಹೋರಾಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದರು.
ನಮ್ಮ ಭಾಷಾ ಹಕ್ಕನ್ನು ಉಳಿಸಿಕೊಳ್ಳಲು ಸಹಭಾಗಿತ್ವದಿಂದ ನಾವು ಹೋರಾಡಬೇಕಾಗಿದೆ. ಎಲ್ಲರೂ ಕನ್ನಡಕ್ಕಾಗಿ ಒಗ್ಗಟ್ಟಾಗೋಣ, ಕನ್ನಡ ಉಳಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ. ಪ್ರತ್ಯಕ್ಷ ಹೋರಾಟದಲ್ಲಿ ಜನಸಂಖ್ಯೆ ಪ್ರಮುಖ ಪಾತ್ರವಹಿಸುತ್ತದೆ. ಸರಕಾರದ ಆದೇಶದ ವಿರುದ್ಧ ನಮ್ಮ ಶಕ್ತಿಪ್ರದರ್ಶನವಾಗಬೇಕಾಗಿದೆ ಎಂದು ಮಹಾಲಿಂಗೇಶ್ವರ ಭಟ್ ಎಂ.ವಿ. ಕರೆನೀಡಿದರು.
ಮೇ.23ರಂದು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾಸರಗೋಡಿನಲ್ಲಿನಡೆಯುವ ಕಲೆಕ್ಟರೇಟ್ ದಿಗ್ಭಂಧನಕ್ಕೆ ಸಂಘಟಿತರಾಗಲು ಬದಿಯಡ್ಕ ಪಂಚಾಯತು ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಕೆ.ಎನ್.ಕೃಷ್ಣ ಭಟ್, ಉಪಾಧ್ಯಕ್ಷರುಗಳಾಗಿ ಜಯಪ್ರಕಾಶ್ ಪಜಿಲ, ಪ್ರಭಾವತಿ ಕೆದಿಲಾಯ, ಅನಂತ ಕುಮಾರ್ ಬರ್ಲ, ಕಾರ್ಯದರ್ಶಿಯಾಗಿ ಗುರುಪ್ರಸಾದ ರೈ, ಜೊತೆಕಾರ್ಯದರ್ಶಿಯಾಗಿ ಚಂದ್ರಶೇಖರ ರೈ, ರವಿಕಾಂತ ಕೇಸರಿ ಕಡಾರು, ಜಲಜಾಕ್ಷಿ ಬದಿಯಡ್ಕ ಹಾಗೂ ಕೋಶಾಧಿಕಾರಿಯಾಗಿ ಅರುಣ್ ಕ್ರಾಸ್ತಾರನ್ನು ಆಯ್ಕೆಮಾಡಲಾಯಿತು. ಬದಿಯಡ್ಕ ಪಂಚಾಯತು ವ್ಯಾಪ್ತಿಯಲ್ಲಿ ವಿವಿಧ ಉಪಸಮಿತಿಗಳನ್ನೂ ರಚಿಸಲಾಯಿತು.
ಕರ್ನಾಟಕ ಸಮಿತಿಯ ಅಧ್ಯಕ್ಷ ಮುರಳೀಧರ ಬಳ್ಳೂಕುರಾಯ ಮಾತನಾಡಿ ಭಾಷಾ ಮಸೂದೆಯ ಕಾನೂನಾತ್ಮಕ ವಿಚಾರಗಳನ್ನು ವಿವರಿಸಿದರು. ವೇದಿಕೆಯಲ್ಲಿ ಬೇ.ಸೀ.ಗೋಪಾಲಕೃಷ್ಣ ಭಟ್, ಶಂಕರನಾರಾಯಣ ಶರ್ಮ, ಪ್ರಭಾವತಿ ಕೆದಿಲಾಯ, ಜಯಪ್ರಕಾಶ ಪಜಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಕೇಳು ಮಾಸ್ಟರ್ ಅಗಲ್ಪಾಡಿ ಮೊದಲಾದವರು ಮಾತನಾಡಿ ಕನ್ನಡಕ್ಕಾಗಿ ನಡೆಯುವ ಹೋರಾಟದಲ್ಲಿ ಕನ್ನಡಿಗರೆಲ್ಲರೂ ಎಚ್ಚೆತ್ತು ಭಾಗವಹಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಕರೆನೀಡಿದರು. ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ ಗುರುಪ್ರಸಾದ ರೈ ವಂದಿಸಿದರು.
…………………………….
*_ತೀರ್ಮಾನಗಳು_*
ವಿವಿಧ ಜಾತಿಯ ಸಂಘಟನೆ, ಕುಟುಂಬಶ್ರೀ ಘಟಕ, ಸ್ವಸಹಾಯ ಸಂಘ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಹೋರಾಟದಲ್ಲಿ ಭಾಗವಹಿಸುವಂತೆ ವಿನಂತಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಬದಿಯಡ್ಕ ಪಂಚಾಯತು ವ್ಯಾಪ್ತಿಯಲ್ಲಿ ಹೋರಾಟದ ಕಿಚ್ಚನ್ನು ಹೆಚ್ಚಿಸಲು ಮೇ.20ರಂದು ವಾಹನ ಪ್ರಚಾರ ಜಾಥಾದ ಮೂಲಕ ವಿವಿಧ ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಲಾಗುವುದು.
ಮೇ.23ರಂದು ಕಾಸರಗೋಡಿನಲ್ಲಿ ಕನ್ನಡಿಗರ ಬೃಹತ್ ಸಮಾವೇಶ, ಜಿಲ್ಲಾಧಿಕಾರಿ ಕಛೇರಿ ದಿಗ್ಭಂಧನ.