ಬಂಟ್ವಾಳ: ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಸೇರಿದಂತೆ ಒಂದನೆ ತರಗತಿಯಿಂದ ಐದನೇ ತರಗತಿವರೆಗೆ ಆಂಗ್ಲ ಭಾಷೆ ಕಲಿಕೆಯನ್ನು ಕಳೆದ ವರ್ಷದಂತೆ ಮುಂದುವರಸಿಕೊಂಡು ಹೋಗಲು ಹೈಕೋರ್ಟ್ ಆದೇಶ ನೀಡಿದರೂ ಒಂದರಿಂದ ಐದನೇ ತರಗತಿವರಗೆ ಆಂಗ್ಲ ಭಾಷೆಯಲ್ಲಿ ಪಠ್ಯ ನೀಡಲು ಶಿಕ್ಷಣ ಇಲಾಖೆ ನಿರಾಕರಿಸಿ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ. ಸೋಮವಾರ ಪಠ್ಯ ಪುಸ್ತಕ ತರಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೋಗಿದ್ದ ಶಾಲಾ ಮುಖ್ಯೋಪಾಧ್ಯಾಯರಿಗೆ ಪಠ್ಯ ಪುಸ್ತಕ ನೀಡಲು ಇಲಾಖಾಧಿಕಾರಿಗಳು ನಿರಾಕರಿಸಿದ ಹಿನ್ನಲೆಯಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಪೋಷಕರು ವಿದ್ಯಾರ್ಥಿಗಳೊಂದಿಗೆ ಧಿಢೀರ್ ಧರಣಿ ಸತ್ಯಾಗ್ರಹ ನಡೆಸಿದರು.

ಮಧ್ಯಾಹ್ನ 12 ಗಂಟೆಯ ವೇಳೆಗೆ ಧರಣಿ ಸತ್ಯಾಗ್ರಹ ಆರಂಭಗೊಂಡಿದ್ದು ಸಂಜೆ 4 ಗಂಟೆಯವರೆಗೂ ಮುಂದುವರೆಯಿತು. ಆಂಗ್ಲ ಮಾಧ್ಯಮದಲ್ಲಿ ಪಠ್ಯ ಪುಸ್ತಕ ನೀಡಿ, ನೀಡುವುದಿಲ್ಲವೆಂದಾದರೆ ಲಿಖಿತವಾಗಿ ಕೊಡಿ ಎನ್ನುವ ಬೇಡಿಕೆಗಳನ್ನು ಪ್ರತಿಭಟನಕಾರರು ಮುಂದಿಟ್ಟಿದ್ದರು. ಈ ನಡುವೆ ಎರಡು ಬಾರಿ ಇಲಾಖಾಧಿಕಾರಿಗಳು ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಮಾತುಕತೆ ಫಲಪ್ರಧವಾಗಲಿಲ್ಲ. ಬೇಡಿಕೆಗೆ ಸ್ಪಂದಿಸದಿದ್ದರೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣ ಎಸೈ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪ್ರತಿಭಟನಕಾರರು, ಕ್ಷೇತ್ರ ಶಿಕ್ಷಣಾಧಿಕಾರಿ ಸಹಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ದಡ್ಡಲಕಾಡು ಶಾಲೆಗೆ ಕಳೆದ ಬಾರಿ ನಾವು ಆಂಗ್ಲ ಮಾಧ್ಯದ ಪುಸ್ತಕಗಳನ್ನು ಅಧಿಕೃತವಾಗಿ ನೀಡಿಲ್ಲ. ಇದಕ್ಕೆ ಯಾವುದೇ ಇಂಡೆಂಟ್ ಇಲ್ಲ. ಖಾಸಗಿ ಶಾಲೆಗಳಿಗೆ ನೀಡಲು ಬಂದಿದ್ದ ಹೆಚ್ಚುವರಿ ಪುಸ್ತಕಗಳನ್ನೇ ದಡ್ಡಲಕಾಡು ಶಾಲೆಗಳಿಗೆ ನೀಡಲಾಗಿದೆ ಎಂದು ಇಲಾಖಾಧಿಕಾರಿ ಮಾಹಿತಿ ನೀಡಿದರು. ಪುಸ್ತಕವೇನೋ ಕೊಟ್ಟಿಲ್ಲ, ಆದರೆ ಆಂಗ್ಲ ಮಾಧ್ಯಮದಲ್ಲೇ ಪರೀಕ್ಷೆ ಬರೆಯಲು ಪಶ್ನೆಪತ್ರಿಕೆಯನ್ನು ಶಿಕ್ಷಣ ಇಲಾಖೆ ಯಾಕೆ ಕೊಟ್ಟಿದೆ? ಎಂಬ ಪ್ರಶ್ನಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ವಾದ ಪ್ರತಿವಾದ ಗೊಂದಲಗಳಿಂದಾಗಿ ಮಾತುಕತೆಯಲ್ಲಿ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗದ ಕಾರಣ ಮತ್ತೆ ನ್ಯಾಯಾಲಯದ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಯಿತು. ಈ ವೇಳೆ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪ್ರಗತಿಪರ ಕೃಷಿಕ ರಾಜೇಶ್ನಾೈಕ್ ಉಳಿಪಾಡಿಗುತ್ತು, ನಗರ ಠಾಣಾ ಎಸೈ ರಕ್ಷಿತ್ ಎ.ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ರಾಮಚಂದ್ರ ಕರೆಂಕಿ, ಪೂವಪ್ಪ ಮೆಂಡನ್, ಪುರುಷೋತ್ತಮ ಅಂಚನ್,ನಂದರಾಮ್ ರೈ, ರಮನಾಥ ರಾಯಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರತಿಭಟನೆಯ ವೇಳೆ ಶಿಕ್ಷಣ ಇಲಾಖೆಯ ಸಿಬ್ಬಂದಿಯೋರ್ವ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಕಾಲಿನಲ್ಲಿ ತುಳಿದುಕೊಂಡು ಹೋಗಿದ್ದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಪ್ರತಿಭಟನಸ್ಥಳಕ್ಕೆ ಬಂದ ಪೊಲೀಸರಿಗೆ ಮಕ್ಕಳು ಈ ಬಗ್ಗೆ ದೂರಿಕೊಂಡ ಘಟನೆಯೂ ನಡೆಯಿತು.
ಉತ್ತರ ಕಾಣದ ಪ್ರಶ್ನೆಗಳು
ಒಂದರಿಂದ ಐದನೇ ತರಗತಿವರೆಗೆ ಸರಕಾರಿ ಶಾಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಕಲಿಸಲು ಅವಕಾಶವಿಲ್ಲ, ಆಂಗ್ಲ ಮಾಧ್ಯಮದಲ್ಲಿ ಪಠ್ಯಪುಸ್ತಕಗಳನ್ನು ನೀಡಲು ನಮಗೆ ಸರಕಾರದ ಆದೇಶವಿಲ್ಲ ಎಂದು ಇಲಾಖಾಧಿಕಾರಿಗಳು ಹೇಳುತ್ತಾರೆ ಹಾಗಾದರೆ ದಡ್ಡಲಕಾಡು ಶಾಲೆಯ ಅಷ್ಟು ಮಕ್ಕಳಿಗೆ ಆಂಗ್ಲ ಮಧ್ಯಮ ಪುಸ್ತಕ ಸಿಕ್ಕಿರುವುದಾದರೂ ಹೇಗೆ?, ಶಿಕ್ಷಣ ಇಲಾಖೆಯೆ ಪುಸ್ತಕವನ್ನು ನೀಡಿ ಈಗ ನಾವು ಕೊಟ್ಟಿಲ್ಲ ಎನ್ನುತ್ತಿರುವುದು ಯಾಕೆ? ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ನೀಡಲು ಬಂದಿರುವ ಹೆಚ್ಚುವರಿ ಪುಸ್ತಕಗಳನ್ನು ದಡ್ಡಲಕಾಡು ಶಾಲೆಗೆ ನೀಡಲಾಗಿದೆ ಎನ್ನುವುದು ಅಧಿಕಾರಿಗಳು ನೀಡುವ ಸ್ಪಷ್ಟನೆಯಾದರೆ ಅನಧಿಕೃತವಾಗಿ ಇಲಾಖೆ ಪುಸ್ತಕವನ್ನು ನೀಡಬಹುದೇ? ನೀಡಿರುವುದು ಕಾನೂನೂ ಬಾಹಿರವಲ್ಲವೇ? ಈ ಪುಸ್ತಕ ಬಳಕೆ ಮಾಡಬಾರದು ಎಂದು ಅಂದೇ ಇಲಾಖೆ ಶಾಲೆಗೆ ಎಚ್ಚರಿಕೆ ನೀಡಬಹುದಿತ್ತಲ್ಲವೇ? ಗುಣಾತ್ಮಕ ಮೌಲ್ಯಂಕನ ಪರೀಕ್ಷೆಗಳನ್ನು ಆಂಗ್ಲ ಭಾಷೆಯಲ್ಲಿ ನಡೆಸಲಾಗಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಶಿಕ್ಷಣಾಧಿಕಾರಿ ಕಚೇರಿ ಆಂಗ್ಲ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಿರುವುದು ಯಾಕೆ? ಮೊದಲಾದ ಪ್ರಶ್ನೆಗಳನ್ನು ಪ್ರತಿಭಟನಕಾರು ಎತ್ತಿದ್ದು ಈ ಪ್ರಶ್ನೆಗಳಿಗೆ ಅಧಿಕಾರಿಗಳಲ್ಲಿ ಉತ್ತರವಿರಲಿಲ್ಲ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷೆ ಕಲಿಕೆ ವಿಚಾರದಲ್ಲಿ ಶಿಕ್ಷಣ ಇಲಾಖೆಯ ದ್ವಂದ್ವ ನೀತಿಯ ವಿರುದ್ದ ರಾಜ್ಯ ರೈತ ಸಂಘದ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಹೆಚ್ಚಾಗಿ ರೈತರ ಮಕ್ಕಳ ವ್ಯಾಸಂಗ ಮಾಡುತ್ತಾರೆ. ಆಂಗ್ಲ ಭಾಷೆ ಕಲಿಕೆ ಇಂದಿನ ಅನಿವಾರ್ಯತೆಯಾಗಿದ್ದು ಬಡ ರೈತರು, ಕೂಲಿಕಾರ್ಮಿಕರ ಮಕ್ಕಳು ಆಂಗ್ಲ ಭಾಷೆ ಕಲಿತು ಉನ್ನತಸ್ತರಕ್ಕೇರುತ್ತಾರೋ ಎನ್ನುವ ಆತಂಕದಿಂದ ಇಂತಹ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಸರಕಾರಿ ಶಾಲೆಗಳ ಉಳಿವಿಗೆ ಪ್ರೋತ್ಸಾಹಿಸಬೇಕಾದ ಶಿಕ್ಷಣ ಇಲಾಖೆಯೇ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಪ್ರತಿಕ್ರಿಯಿಸಿದ್ದಾರೆ.