ಬಂಟ್ವಾಳ:ಕರ್ನಾಟಕ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತದ್ದಂತೆ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವವು ಶುರುವಾಗಿದೆ.ಬಂಟ್ವಾಳ ವಿಧಾನಸಭಾಕ್ಷೇತ್ರದ ರಾಯಿಮತ್ತು ಕೊಯಿಲ ಗ್ರಮಗಳಲ್ಲಿ ಕಳೆದವಾರ ಕಾಂಗ್ರಸ್ನ ಕೆಲಕಾರ್ಯಕರ್ತರು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರೆ,ಎರಡುದಿನಗಳ ಹಿಂದೆ ಇದೇ ಗ್ರಾಮಗಳ ಕೆಲ ಬಿಜೆಪಿ ಕಾರ್ಯಕರ್ತರು ಸಚಿವ ರಮಾನಾಥ ರೈಯವರ ಸಮಕ್ಷಮದಲ್ಲಿ ಕಾಂಗ್ರೆಸ್ ಸೇರಿದರು.ಇತ್ತೀಚೆಗೆ ಪುರಸಭಾ ವ್ಯಾಪ್ತಿಯ ಬಾರೆಕಾಡು-ಲೊರೆಟ್ಟೊ ಪರಿಸರದ ಕಾಂಗ್ರಸ್ ನ ಕೆಲ ಮುಸ್ಲಿಂ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿ ಗಮನಸೆಳೆದಿದ್ದರು.

ಚುನಾವಣೆಗಳು ಸಮೀಪಿಸುತ್ತದ್ದಂತೆಲ್ಲಾ ವಿವಿಧ ಪಕ್ಷಗಳ ಅಸಮಾಧಾನಿತ ಕಾರ್ಯಕರ್ತರು,ಮುಖಂಡರು ಪಕ್ಷಾಂತರಗೊಳ್ಳುವುದು ಮಾಮೂಲಿ ಪ್ರಕ್ರಿಯೆಯಾಗಿದೆ.ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೊಂಚ ಬೇಗನೆ ಪಕ್ಷಾಂತರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.ಈ ನಡುವೆ ಕರ್ನಾಟಕ ವಿಧಾನಸಭೆಗೆ ಮುಂದಿನ ಏಳೆಂಟು ತಿಂಗಳಲ್ಲಿ ಚುನಾವಣೆ ನಡೆದರೂ ಅಚ್ಚರಿಯಿಲ್ಲ.ಹಾಗಾಗಿ ಇಲ್ಲಿನ ಬಿಜೆಪಿ ಮತ್ತು ಕಾಂಗ್ರಸ್ ನ ಕಾರ್ಯಕರ್ತರು ,ಮುಖಂಡರು ಕೂಡ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.ಕಾಂಗ್ರೆಸ್ ನಿಂದ ಸಚಿವ ರಮಾನಾಥ ರೈ ಅವರೇ ಅಭ್ಯರ್ಥಿ , ಬಿಜೆಪಿಯಿಂದ ಯುವ ನೇತಾರ,ಪ್ರಗತಿಪರ ಕ್ರಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಭ್ಯರ್ಥಿ ಬಹುತೇಕ ಖಚಿತ.ಉಭಯ ನಾಯಕರು ಬೂತ್ ಮಟ್ಟದ ಕಾರ್ಯಕರ್ತರ ಭೇಟಿ,ಕಾರ್ನರ್ ಮೀಟಿಂಗ್ ನಡೆಸುವುದರ ಜೊತೆಗೆ ವಿವಿಧ ಸಭೆ,ಸಮಾರಂಭದಲ್ಲೂ ಕಾಣಿಸತೊಡಗಿದ್ದಾರೆ.ಸಚಿವ ರಮಾನಾಥ ರೈವರು ಕಾಮಗಾರಿಯ ಕೊನೆ ಹಂತದಲ್ಲಿರುವ ಮಿನಿವಿಧಾನಸೌಧ,ಮೆಸ್ಕಾಂ ಕಚೇರಿ ಕಟ್ಟಡ , ನೂತನ ಪ್ರವಾಸಿ ಮಂದಿರ ,ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹಿತ ವಿವಿಧ ಅಭಿವ್ರದ್ದಿ ಕಾಮಗಾರಿಯನ್ನು ಮುಖ್ಯಮಂತ್ರಿಯವರಿಂದಲೇ ಲೋಕಾರ್ಪಣೆಗೆ ದಿನ ನಿಗದಿಪಡಿಸಿ ತನ್ಮೂಲಕ ಮುಂದಿನ ಚುನಾವಣೆಗೆ ಪಾಂಚಜನ್ಯ ಊದಲು ವೇದಿಕೆ ಸಿದ್ದಪಡಿಸುತ್ತಿದ್ದಾರೆ.

ಇತ್ತ ಬಿಜೆಪಿ ರಾಜೇಶ್ ನಾಯ್ಕ್ ಅವರ ನಾಯಕತ್ವದಲ್ಲಿ ಸಮಗ್ರ ಒಳಚರಂಡಿ ವ್ಯವಸ್ಥೆಯಿಲ್ಲದೆ ತ್ಯಾಜ್ಯ,ಕೊಳಚೆ ನೀರು ನೇತ್ರಾವತಿ ಒಡಲು ಸೇರುವುದರೊಂದಿಗೆ ಜನರ ಬದುಕಿನಲ್ಲಿ ಚೆಲ್ಲಾಟವಾಡುವುದು, ಅಕ್ರಮ ಮರಳುದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗದಿರುವುದು,94ಸಿ,ಸಿಸಿಯಡಿ ಹಕ್ಕುಪತ್ರ ವಿತರಣೆಯಲ್ಲಿ ಅಧಿಕಾರಿಗಳ ಮೂಲಕ ತಾರತಮ್ಯ ,ರಾಜಕಾರಣ ಹೀಗೆ ಹತ್ತು ಹಲವು ಸಮಸ್ಯೆಯನ್ನು ಮುಂದಿಟ್ಟು ಚುನಾವಣೆಗೆ ರಣಕಹಳೆ ಮೊಳಗಿಸಲು ಸಜ್ಜಾಗುತ್ತಿದೆ.ಈಗಾಗಲೇ ಉಭಯ ಪಕ್ಷದಿಂದ ಕದನ ಕುತೂಹಲ ಆರಂಭವಾಗಿದೆ.