ಬಂಟ್ವಾಳ: ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತಮ ಹೆಸರಿದೆ. ಬೆರಳೆಣಿಕೆಷ್ಟು ಜನರಿಂದಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಎರಡೂ ಸಮುದಾಯದ ಹಿರಿಯ ಮುಖಂಡರು ಯುವ ಜನರನ್ನು ಸರಿದಾಗೆ ತರುವ ಕೆಲಸ ಮಾಡಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಜಗದೀಶ್ ಹೇಳಿದರು.
ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಲಡ್ಕದಂತ ಗ್ರಾಮೀಣ ಭಾಗದಲ್ಲೂ ಎರಡೂ ಸಮುದಾಯದಲ್ಲಿ ಬುದ್ದಿವಂತ, ಸಾಮಾಜಿಕ ಜವಾಬ್ದಾರಿವುಳ್ಳ ಮಹನಿಯರಿದ್ದಾರೆ. ಯಾವುದೇ ಅಹಿತಕರ ಘಟನೆಗಳಾದ ತಕ್ಷಣ ಎರಡೂ ಸಮುದಾಯದ ಮುಖಂಡರು ಅಥವಾ ಹಿರಿಯರು ಸೇರಿಕೊಂಡು ಪರಿಸ್ಥಿತಿ ಉಲ್ಬಣವಾಗದಂತೆ ಪ್ರಯತ್ನಿಸಬೇಕು ಎಂದರು.
ಘಟನೆಗೆ ಮೂಲ ಕಾರಣಕರ್ತರಾದವರನ್ನು ಕೂಡಾ ಕಾನೂನಿನ ಕೈಗೆ ಒಪ್ಪಿಸಬೇಕು ಎಂದ ಅವರು, ಕಲ್ಲಡ್ಕದಲ್ಲಿ ಮತ್ತೆ ಕೋಮು ಸೌಹಾರ್ದತೆ ಮರುಸ್ಥಾಪಿಸುವ ನಿಟ್ಟಿನಲ್ಲಿ ಕ್ರೀಡಾಕೂಟ, ವಿವಿಧ ಕಾರ್ಯಕ್ರಮಗಳನ್ನು ಎರಡೂ ಸಮುದಾಯದ ಪ್ರಮುಖರು ಒಟ್ಟು ಸೇರಿ ರೂಪಿಸಬೇಕು. ಇದರಲ್ಲಿ ತಾವು ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಹೇಳಿದರು.

ತಾಳ್ಮೆ ಅಗತ್ಯ: ಘಟನೆಗೆ ಸಂಬಂದಿಸಿ ಉಭಯ ಕೋಮುಗಳಿಂದಲೂ ಅಮಾಯಕರನ್ನು ಬಂಧಿಸಲಾಗಿದೆ ಎಂದು ಸಭೆಯಿಂದ ಕೇಳಿ ಬಂದ ಬಹುತೇಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಘಟನೆ ನಡೆದ ಕೂಡಲೇ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವುದು, ಗಡುವು ನೀಡುವುದರಿಂದ ಅಮಾಯಕ ಬಂಧನವಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ತನಿಖೆ ನಡೆಸಿ ನೈಜ್ಯ ಆರೋಪಿಗಳನ್ನು ಬಂಧಿಸುವವರೆ ತಾಳ್ಮೆ ವಹಿಸಬೇಕಾಗುತ್ತದೆ ಎಂದಾಗ ಸಭೆ ಇದಕ್ಕೆ ಸಹಮತ ವ್ಯಕ್ತಪಡಿಸಿತು.
ಘಟನೆಯ ಸಂದರ್ಭಗಳಲ್ಲಿ ಇಲಾಖಾ ವತಿಯಿಂದ ಲೋಪಗಳು ಆಗಿದ್ದಲ್ಲಿ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಲಾಗುವುದು. ಇಲ್ಲಿ ಬಂದಿರುವ ಎಲ್ಲ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪೊಲೀಸ್ ಹೊರ ಠಾಣೆಯನ್ನು ಬಸ್ ತಂಗುದಾನದ ಮೇಲ್ಬಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅನುದಾನ ಒದಗಿಸಲಾಗುವುದು ಎಂದ ಅವರು, ಒಟ್ಟಾರೆಯಾಗಿ ಕಲ್ಲಡ್ಕದಲ್ಲಿ ಶಾಂತಿ ಮರುಸ್ಥಾಪಿಸಲು ಇಲ್ಲಿನ ನಾಗರಿಕರು ಸಹಕರಿಸಬೇಕೆಂದು ಕೋರಿದರು.
ಸ್ಕ್ರೀನ್ ಶಾರ್ಟ್ ಕೊಡಿ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಸೃಷ್ಟಿಸುವುದು ಮತ್ತು ಅದನ್ನು ಬೇರೆಯವರಿಗೆ ರವಾನಿಸುವುದು ಕೂಡಾ ಕಾನೂನಿನಲ್ಲಿ ಅಪರಾಧವಾಗಿದೆ. ಇದಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದ್ದು ಅಂತಹ ಸಂದೇಶ ರವಾನಿಸುವವರ ಮಾಹಿತಿಯನ್ನು ಇಲಾಖೆಯ ಅಧಿಕಾರಿಗಳ ಮೊಬೈಲ್ಗೆ ಸ್ಕ್ರೀನ್ ಶಾರ್ಟ್ ಮಾಡಿ ರವಾನಿಸಿದರೆ ಅಂತವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಹೇಳಿದರು.
ಕಲ್ಲಡ್ಕದಲ್ಲಿ ಈಗಿರುವ ಪೊಲೀಸ್ ಔಟ್ ಪೋಸ್ಟ್ನ್ನು ಅಹಿತಕರ ಘಟನೆಗಳು ಸಂಭವಿಸುವ ಮೇಲಿನ ಪೇಟೆಯಲ್ಲಿರುವ ಬಸ್ ತಂಗುದಾಣದ ಮೇಲೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಇಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ಔಟ್ ಪೋಸ್ಟ್ ನಿರ್ಮಿಸಲಾಗುವುದು ಎಂದು ಹೇಳಿದ ಎಸ್ಪಿ, ಅಲ್ಲಿ ಪೊಲೀಸ್ ಪಡೆ ಸನ್ನದ್ಧ ಸ್ಥಿತಿಯಲ್ಲಿರುತ್ತದೆ ಎಂದರು.
ಗಾಂಜಾ ನಿರ್ಮೂಲನೆ:
ಹದಿಹರೆಯದ ಯುವಕರು ದುಷ್ಕøತ್ಯಗಳಲ್ಲಿ ತೊಡಗಿರುವುದನ್ನು ಗಮನಿಸಿದ್ದೇನೆ. ಅವರಲ್ಲಿ ಬಹುತೇಕ ಗಾಂಜಾ ವ್ಯಸನಿಗಳಾಗಿದ್ದಾರೆ. ಗಾಂಜಾ ನಿರ್ಮೂಲನೆ ಕಲ್ಲಡ್ಕದಲ್ಲಿ ಶೇ.100ರಷ್ಟು ಆಗಬೇಕು. ಅದನ್ನು ಸೇವಿಸುವವರ ಮೇಲೆ ಕಠಿಣ ಸೆಕ್ಷನ್ ಗಳನ್ನು ಹಾಕಿ ಶಿಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಸಿ, ಸಮುದಾಯದ ನಾಯಕರು ಯುವಜನರ ಚಟುವಟಿಕೆಯ ಮೇಲೆ ಕಣ್ಣಿರಿಸಲು ಸಲಹೆ ನೀಡಿದರಲ್ಲದೆ ನೈಜ ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಆರೋಪಿಗಳ ಭಾವಚಿತ್ರದೊಂದಿಗೆ ಅವರು ಆರೋಪಿಗಳು ಎಂದು ಖಚಿತಪಡಿಸಿಕೊಂಡ ಬಳಿಕ ಬಂಧಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು ಇನ್ನು ಮುಂದೆ ಕ್ಯಾಮರದೊಂದಿಗೆ ಪೊಲೀಸರು ಕಾರ್ಯಚರಣೆ ನಡೆಸಲಿದ್ದಾರೆ ಅಂತಹ ಘಟನೆ ಕಂಡು ಬಂದರೆ ಪರಿಶೀಲಿಸಿ ಕ್ರಮ ಕ್ಯೆ ಗೊಳ್ಳಲಾಗುವುದು.
ಘಟನೆ ದಿನ ಏನಾಗಿತ್ತು:
ಘಟನೆ ದಿನ ನಡೆದದ್ದೇನು ಎಂಬುದು ಪೊಲೀಸರಿಗೆ ಗೊತ್ತು. ಎರಡೂ ಕಡೆಯ ಜನರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದ ಕಾರಣ ಹೆಚ್ಚಿನ ಅನಾಹುತವಾಗಲಿಲ್ಲ ಎಂದ ಎಸ್ಪಿ, ಇದನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದಿತ್ತು ಎಂದು ಒಪ್ಪಿಕೊಂಡರು.
ಯಾವ ಅಂಗಡಿಯನ್ನೂ ಬಂದ್ ಮಾಡಲ್ಲ;
ನಿಮ್ಮ ದೈನಂದಿನ ವ್ಯವಹಾರಕ್ಕೆ ತೊಂದರೆ ಆಗುವುದಿಲ್ಲ. ಆರು ಗಂಟೆಗೆ ನಿಮ್ಮ ಅಂಗಡಿ ಬಂದ್ ಮಾಡಿ ಎಂದು ಪೊಲೀಸರು ಹೇಳುವುದಿಲ್ಲ ಎಂದು ವ್ಯಾಪಾರಿಗಳಿಗೆ ಆಶ್ವಾಸನೆ ನೀಡಿದ ಎಸ್ಪಿ, ಯಾರಿಗೆ ಸಾಧ್ಯವೋ ಅವರೆಲ್ಲ ಸಿಸಿ ಕ್ಯಾಮರಾ ಹಾಕಿ ಮತ್ತು ಅದು ಸರಿಯಾದ ಜಾಗದಲ್ಲಿ ಇರುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಕಲ್ಲಡ್ಕ ಡಾ. ಪ್ರಭಾಕರ ಭಟ್, ಅಬುಬಕ್ಕರ್ ಸಿದ್ದೀಕ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮತ್ತು ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಇದಿನಬ್ಬ, ಪದ್ಮನಾಭ ರೈ,ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಉದ್ಯಮಿ ಹನೀಫ್ ಅಹಮ್ಮದ್, ಪಂಚಾಯತ್ ಸದಸ್ಯ ಗೋಪಾಲ ಪೂಜಾರಿ, ಶೆರೀಫ್, ಆಯಿಷಾ ಮತ್ತು ಶಾಫಿ ಮಾತನಾಡಿ ವಿವಿಧ ವಿಷಯಗಳ ಕುರಿತು ಗಮನ ಸೆಳೆದರು.
ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಇಬ್ಬರ ನಡುವೆ ನಡೆದ ವೈಯಕ್ತಿಕ ಜಗಳಕ್ಕೆ ಆಡಳಿತವೇ ಕೋಮು ಬಣ್ಣ ಹಚ್ಚುವುದು ಯಾಕೆ ಎಂದು ಪ್ರಶ್ನಿಸಿದರು. ಈ ಸಂದರ್ಭ ಅವರು ಘಟನಾವಳಿಯ ಬಗ್ಗೆ ಅಧಿಕಾರಿಗಳ ಗಮನಸೆಳೆದು ಕಳೆದ ಎರಡು ಘಟನೆಗಳಲ್ಲಿ ಎರಡು ಸಮುದಾಯದ ಅಮಾಯಕರ ಬಂಧನವಾಗಿದೆ. ಗೂಂಡಾಗಳಿಗೂ ಅಮಾಯಕರಿಗೂ ಒಂದೇ ರೀತಿಯ ಶಿಕ್ಷೆ ಎಂಬಂತಾಗಿದೆ. ಲೆಕ್ಕ ಭರ್ತಿಗಾಗಿ ಪೊಲೀಸರು ಅಮಾಯಕರನ್ನು ಬಂಧಿಸುವದು ಸರಿಯಲ್ಲ ಎಂದರು. ಕಲ್ಲಡ್ಕದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಮುಸ್ಲಿಂರು ಬಹು ಸಂಖ್ಯಾತರಾಗಿದ್ದಾರೆ, ನಮ್ಮದು ಗೂಂಡಾಗಿರಿಯ ವಿರುದ್ದ ಹೋರಾಟ ಜೊತೆಗೆ ಇಲ್ಲಿ ನಮ್ಮ ಬದುಕಿನ ಪ್ರಶ್ನೆ. ಎಲ್ಲರೂ ಒಗ್ಗಟ್ಟಾಗಿ ಬದುಕಬೇಕಾಗಿದೆ. ಹೀಗಾಗಿ ಅಮಾಯಕರನ್ನು ಬಂಧಿಸಬೇಡಿ ಎಂದು ಆಗ್ರಹಿಸಿದರು. ಮೊನ್ನೆಯ ಘಟನೆಯಲ್ಲಿ ಬ್ಯಾಂಕ್ ಮೆನೇಜರ್ ಹಾಗೂ ರಾಮ ಮಂದಿರದ ನಿರ್ಮಾಣದ ಕೆಲ ಕಾರ್ಮಿಕರನ್ನು ವಿನಾ ಕಾರಣ ಬಂಧಿಸಲಾಗಿದೆ ಎಂದು ಆಪಾದಿಸಿದರು.
ಅಬೂಬಕ್ಕರ್ ಸಿದ್ದೀಕ್, ಘಟನೆ ಕುರಿತು ಏನೂ ಅರಿವಿಲ್ಲದ ಎರಡೂ ಸಮುದಾಯದ ಅಮಾಯಕರನ್ನು ಬಂಧಿಸಿ ಸೆ.307 ಸಹಿತ ವಿವಿಧ ಕಾಯ್ದೆಯನ್ನು ಹೊರಿಸಲಾಗಿದೆ ಅವರ ಮೇಲಿನ ಈ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಮಾತನಾಡಿ, ಉದ್ವೇಗ ಶಮನ ಮಾಡಲು ತಂಡ ರಚನೆಯಾಗಬೇಕು ಎಂದರು.
ಸಿಸಿ ಕ್ಯಾಮರಾದಲ್ಲಿರುವವರು ಎಲ್ಲರೂ ತಪ್ಪಿತಸ್ಥರಲ್ಲ ಎಂದು ಹೇಳಿದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರನ್ನು ಗುರುತಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಯಾರೂ ಇಲ್ಲಿ ಅಶಾಂತಿಯನ್ನು ಬಯಸುವವರಿಲ್ಲ. ಶಾಂತಿ ಸಭೆಗಳು ಕಾಟಾಚಾರಕ್ಕೆ ನಡೆಯಬಾರದು ಎಂದರು.
ಇದಿನಬ್ಬ ಮಾತನಾಡಿ, ಕಲ್ಲಡ್ಕದಲ್ಲಿ ಕೋಮು ಸೌಹಾರ್ದ ವಾತಾವರಣ ಅನಿವಾರ್ಯ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭಕೊಟ್ಟಾರಿ ಮಾತನಾಡಿ ಇಬ್ಬರ ಘರ್ಷಣೆ ಬಳಿಕದ ಬೆಳವಣಿಗೆ ಅಗತ್ಯವಿರಲಿಲ್ಲ, ಶಾಂತಿ ಸಭೆ ಬಳಿಕ ಉಳಿದವರಿಗೆ ಪ್ರೇರಣೆ ನೀಡುವ ಕೆಲವಾಗಬೇಕು ಎಂದು ಸಲಹೆ ನೀಡಿದರು.
ಹನೀಫ್ ಮಾತನಾಡಿ, ಈಗಿರುವ ಔಟ್ಪೋಸ್ಟ್ ಕಾಟಾಚಾರಕ್ಕೆಂಬಂತೆ ಇದೆ ಎಂದು ಗಮನ ಸೆಳೆದರು.
ಆಯಿಷಾ ಮಾತನಾಡಿ, ಪೊಲೀಸರು ತನಿಖೆಯ ನೆಪದಲ್ಲಿ ಮನೆಯೊಳಗೆ ನುಗ್ಗಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ಆಪಾದಿಸಿದರು. ಸಿಐ ವಿ ಕೃಷ್ಣಯ್ಯ ವಂದಿಸಿದರು.