ಮೂಡುಬಿದರೆ: ಅಕ್ರಮ ಮದ್ಯ ಮಾರಾಟವನ್ನು ಪ್ರಶ್ನಿಸಿದ ಮಹಿಳೆಗೆ ಇಬ್ಬರು ವ್ಯಕ್ತಿಗಳು ಜೀವಬೆದರಿಕೆಯೊಡ್ಡಿದ ಘಟನೆ ತೋಡಾರಿನಲ್ಲಿ ನಡೆದಿದೆ.
ತೋಡಾರಿನಲ್ಲಿ ಪ್ರವೀಣ ಎಂಬವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಇದು ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗುತಿತ್ತೆನ್ನಲಾಗಿದೆ. ಮದ್ಯ ಮಾರಾಟ ಮಾಡದಂತೆ ದೇವಕಿ ಎಂಬಾಕೆ ಪ್ರವೀಣರಲ್ಲಿ ಹೇಳಿದಾಗ ಆತ ಮತ್ತು ಸ್ನೇಹಿತ ವರ್ಧಮಾನ ಬಲಿಪ ಸೇರಿಕೊಂಡು ಮಹಿಳೆಗೆ ಜೀವಬೆದರಿಕೆಯೊಡ್ಡಿದ್ದಾರೆಂದು ದೂರಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅದೇ ದಿನ ನಡೆದ ಇನ್ನೊಂದು ಘಟನೆಯಲ್ಲಿ ತೋಡಾರು ಬಾವದಬೆಟ್ಟು ಎಂಬಲ್ಲಿ ಸಾರ್ವಜನಿಕ ರಸ್ತೆ ಬಂದ್ ಮಾಡಿದನ್ನು ಪ್ರಶ್ನಿಸಿದ ವ್ಯಕ್ತಿಗೆ ಜಾತಿನಿಂದನೆ ಮಾಡಿದ ಆರೋಪದಲ್ಲಿ ಪ್ರವೀಣ ಮತ್ತು ವರ್ದಮಾನ ಬಲಿಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾವದಬೆಟ್ಟು ಎಂಬಲ್ಲಿ ಸಾರ್ವಜನಿಕರು ಓಡಾಡುತ್ತಿದ್ದ ರಸ್ತೆಯನ್ನು ಆರೋಪಿಗಳು ಇತ್ತೀಚೆಗೆ ಬೇಲಿ ಹಾಕಿ ಬಂದ್ ಮಾಡಿದ್ದಾರೆಂದು ದೂರಲಾಗಿತ್ತು. ಈ ಬಗ್ಗೆ ಕರುಣಾಕರ ಎಂಬವರು ಸ್ಥಳಕ್ಕೆ ಭೇಟಿ ನೀಡಿ ಬೇಲಿ ತೆರವು ಮಾಡುವಂತೆ ಕೇಳಿಕೊಂಡಾಗ ಆರೋಪಿಗಳು ಪರಿಶಿಷ್ಟ ಜಾತಿಗೆ ಸೇರಿದ್ದ ಕರುಣಾಕರ ಅವರಿಗೆ ಬೈದು ಜಾತಿ ನಿಂದನೆ ಮಾಡಿದ್ದರೆನ್ನಲಾಗಿದೆ. ಪಣಂಬೂರು ಎಸಿಪಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ