ಬಂಟ್ವಾಳ: ಹಿಂದಿನ ಕಾಲದಲ್ಲಿ ಮಳೆ ನೀರನ್ನು ಅಣೆಕಟ್ಟೆಯಂಥ ನಾನಾ ವಿಧಾನಗಳ ಮೂಲಕ ಸಂಗ್ರಹ ಮಾಡುತ್ತಿದ್ದು, ನೀರಿನ ಸಮಸ್ಯೆ ಅನುಭವಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಜಲಸಂಪನ್ಮೂಲಗಳನ್ನು ನಿಭಾಯಿಸುವ ಕೆಲಸ ಮಾಡಬೇಕಾಗಿದೆ. ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಗ್ರಾಮ ಪಂಚಾಯತ್ ಕೈ ಜೋಡಿಸುತ್ತಿರುವುದು ಅಭಿನಂದನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಕೆ ಹೇಳಿದ್ದಾರೆ.ತಾಲೂಕಿನ ಬೋಳಂತೂರು ನಾರಂಕೋಡಿಯಲ್ಲಿ ನಡೆದ ಯೋಜನೆಯ ಬಂಟ್ವಾಳ ಘಟಕ ಹಾಗೂ ಬೋಳಂತೂರು ಗ್ರಾಪಂ ಸಹಯೋಗದಲ್ಲಿ ಕೊಳವೆ ಬಾವಿ ಮರುಪೂರಣ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಲ್ಲಡ್ಕ ವಲಯದ ಒಕ್ಕೂಟ ಅಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ ಅಧ್ಯಕ್ಷರಾದ ಎಸ್.ಎಂ. ಅಬೂಬಕ್ಕರ್ ಮಾಹಿತಿ ನೀಡುತ್ತಾ ನೀರಿಂಗಿಸುವ ಕೆಲಸ ಪುಣ್ಯದ ಕೆಲಸ, ಭೂಮಿಗೆ ಬೀಳುವ ಮಳೆ ನೀರನ್ನು ವ್ಯರ್ಥ ಮಾಡದೆ ಭೂಮಿಗೆ ಇಂಗಿಸುವಂತೆ ತಿಳಿಸಿದರು.ಮಣ್ಣಿಗೂ ಮತ್ತು ನೀರಿಗೂ ನಿಕಟ ಸಂಬಂಧವಿದ್ದು ಮಣ್ಣಿನಲ್ಲಿ ನೀರಿನ ಶುದ್ಧೀಕರಣವಾಗುತ್ತದೆ. ಮಳೆ ಕೊಯ್ಲು ಹಾಗೂ ಕೊಳವೆ ಬಾವಿ ಮರುಪೂರಣ ಬಗ್ಗೆ ಪ್ರಾತ್ತಕ್ಷಿಕೆಯನ್ನು ನಡೆಸಿ ಮಾಹಿತಿ ನೀಡಿದರು. ಮುಂದೆ ನೀರಿಗಾಗಿ ನಡೆಯುವ ಯುದ್ಧವನ್ನು ತಪ್ಪಿಸಲು ಜಲ ಸಂರಕ್ಷಣೆ ಅಗತ್ಯ ಎಂದು ತಿಳಿಸಿದರು.
ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯಕ್ ಮಾತನಾಡಿ, ತಾಲೂಕಿನಲ್ಲಿ ನಡೆಯುವ ಜಲಾನಯನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಬೊಳಂತ್ತೂರು ಗ್ರಾಮ ಪಂಚಾಯತ್ ಸದಸ್ಯ ಬಶೀರ್, ಬೊಳಂತ್ತೂರು ಒಕ್ಕೂಟ ಅಧ್ಯಕ್ಷೆ ಸೀತಾ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ನಾರಾಯಣ ಕೆ ಸ್ವಾಗತಿಸಿದರು. ಕಲ್ಲಡ್ಕ ವಲಯದ ಮೇಲ್ವಿಚಾರಕಿ ಸೌಮ್ಯ ವಂದಿಸಿದರು. ಸೇವಾಪ್ರತಿನಿಧಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು.