ಮಂಗಳೂರು: ರಾಜ್ಯ ಸರಕಾರ ಹಿಂದು ಮುಖಂಡರ ಮೇಲೆ ವಿನಾಕಾರಣ ಸುಳ್ಳು ಕೇಸು ಹಾಕಿದ ಮಾತ್ರಕ್ಕೆ ಹಿಂದು ಸಮಾಜ ಬಗ್ಗುವುದಿಲ್ಲ. ಅನ್ಯಾಯದ ವಿರುದ್ಧದ ಹೋರಾಟ ನಿರಂತರ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ನಾ.ಸೀತಾರಾಮ ಹೇಳಿದರು.ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ವತಿಯಿಂದ ಭಾನುವಾರ ಪ್ರತಾಪನಗರದ ಸಂಘನಿಕೇತನದಲ್ಲಿ ನಡೆದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮತೀಯ ಶಕ್ತಿಗಳಿಗೆ ಪ್ರೋತ್ಸಾಹ ನೀಡುವ ಸರಕಾರ ಅಧಿಕಾರದಲ್ಲಿರುವುದರಿಂದಲೇ ಅಶಾಂತಿ ತಲೆದೋರಲು ಕಾರಣವಾಗಿದೆ. ಇತರರ ಓಲೈಕೆಗಾಗಿ ಸರಕಾರ ಹಿಂದುಗಳನ್ನೇ ಗುರಿಯಾಗಿಸಿ ಕೇಸು ಹಾಕಿದರೆ ಸುಮ್ಮನೆ ಕೂರುವುದಿಲ್ಲ. ಹಿಂದುಗಳ ತಾಳ್ಮೆಯನ್ನು ಪರೀಕ್ಷಿಸಲು ಮುಂದಾದರೆ ತಕ್ಕ ಬೆಲೆಯನ್ನು ತೆರಬೇಕಾದೀತು. ಸರಕಾರ ಇದನ್ನು ಅರಿತುಕೊಳ್ಳಬೇಕು ಎಂದು ಅವರು ಎಚ್ಚರಿಸಿದರು.ಈ ದೇಶದಲ್ಲಿ ಹಿಂದುಗಳು ಇದ್ದರೆ ಮಾತ್ರ ಮಾನವೀಯತೆ ಉಳಿಯಲು ಸಾಧ್ಯ. ಇಲ್ಲಿ ಸಂವಿದಾನ ಎಂಬುದು ಉಳಿದಿರುವುದು ಕೂಡ ಹಿಂದು ಸಮಾಜದಿಂದಲೇ ಎಂದವರು ಹೇಳಿದರು.

ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಖುರ್ಚಿಗೆ ಕುತ್ತು ಬರುತ್ತದೆ ಎಂದು ಗೊತ್ತಾಗುತ್ತಿದ್ದಂತೆಯೇ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ. ಹಿಂದುಗಳ ಮೇಲೆಯೇ ಕೇಸು ಹಾಕಲಾಗುತ್ತಿದ್ದು, ಇದನ್ನು ಸಮಾಜ ಸಹಿಸದು ಎಂದರು.
ನಮ್ಮ ಸಂಘಟನೆ ಇದುವರೆಗೆ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿಲ್ಲ. ಆದರೆ ಮುಖ್ಯಮಂತ್ರಿಗಳಿಗೆ ಹಿಂದು ಸಂಘಟನೆಗಳ ಹೆಸರೊಂದೇ ನೆನಪಿರುವುದು. ಗಲಭೆಗೆ ಸೃಷ್ಟಿಸುವ ಸಂಘಟನೆಗಳ ಹೆಸರೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಗೋವುಗಳ ಕಳ್ಳತನ ಮತ್ತು ತಾಯಂದಿರಿಗೆ ಕಿರುಕುಳ ನೀಡುವ ಘಟನೆ ನಡೆದಾಗ ಹಿಂದು ಸಂಘಟನೆಗಳು ಎದ್ದು ನಿಂತು ಹೋರಾಟ ನಡೆಸಿದೆ.ಹಿಂದು ಸಮಾಜಕ್ಕೆ ದಕ್ಕೆಯಾಗಲು ತಮ್ಮ ಹಿಂದೂ ಸಂಘಟನೆಗಳು ಬಿಡಲಾರವು. ಪೊಲೀಸ್ ಇಲಾಖೆ ಹಿಂದುಗಳನ್ನೇ ಗುರಿಯಾಗಿಸದೆ ಅಶಾಂತಿ ಸೃಷ್ಟಿಸುವವರನ್ನು ಬಂಧಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಪುರಾಣಿಕ್ ಆಗ್ರಹಿಸಿದರು.

*ದೇಶದ್ರೋಹಿಗಳ ಮೇಲೆ ಪೌರುಷ ತೋರಿಸಿ
ಮೂಲಭೂತವಾದಿಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಶ್ಮೀರ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿರುವ ಸರಕಾರ ಕೂಡ ಅವರ ಪರವಾಗಿಯೇ ಇದೆ ಅಶ್ರಫ್ ಹಂತಕರನ್ನು ಬಂಧಿಸಿರುವ  ಪೊಲೀಸರಿಗೆ ಶರತ್ ಹಂತಕರನ್ನು ಬಂಧಿಸಲು ಸಾಧ್ಯವಾಗದಿರುವುದು ವಿಪರ್ಯಾಸ. ಚಿರಂಜೀವಿ, ಪವನ್‍ರಾಜ್ ಮೇಲೆ ದಾಳಿ ನಡೆಸಿದವರನ್ನು ಕೂಡ ಪೊಲೀಸರು ಬಂಧಿಸಿಲ್ಲ.ಪೊಲೀಸರು ತಮ್ಮ ಪೌರುಷವನ್ನು ದೇಶದ್ರೋಹಿಗಳ ಮೇಲೆ ತೋರಿಸಬೇಕೇ ಹೊರತು ಅಮಾಯಕ ಹಿಂದು ಯುವಕರ ಮೇಲಲ್ಲ ಎಂದು ವಿಹಿಂಪ ದ.ಕ.ಜಿಲ್ಲಾಧ್ಯಕ್ಷ ಜಗದೀಶ ಶೇಣವ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲಡ್ಕ ಪ್ರಭಾಕರ ಭಟ್ ಮೇಲೆ 307 ಕೇಸು ಹಾಕಲು ಎಸ್ಪಿಯವರಿಗೆ ಆದೇಶ ನೀಡುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ದೇವಸ್ಥಾನ, ಮಸೀದಿ, ಇಗರ್ಜಿಗಳಿಗೆ ಹೋಗಿ ದೇವರಲ್ಲಿ ಶರತ್ ಹಂತಕರನ್ನು ಬಂಧಿಸಲು ಮನವಿ ಮಾಡುತ್ತಿದ್ದಾರೆ. ಇದು ವಿಪರ್ಯಾಸ. ಪೊಲೀಸರಿಗೆ ಅಧಿಕಾರ ನೀಡದೆ ಜನತೆಯ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಶರತ್ ಸಾವಿನ ನ್ಯಾಯಕ್ಕಾಗಿ ಜಿಲ್ಲೆಯ 2 ಲಕ್ಷ ಜನರನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇವೆ ಎಂದವರು ಹೇಳಿದರು.
ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ದ.ಕ.ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್ ಉಪಸ್ಥಿತರಿದ್ದರು.
ಬಜರಂಗದಳ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು. ವಿಭಾಗ ಸಂಯೋಜಕ ಸುನಿಲ್ ಕೆ.ಆರ್. ಖಂಡನಾ ನಿರ್ಣಯ ವಾಚಿಸಿದರು. ವಾಸುದೇವ ಗೌಡ ವಂದಿಸಿದರು.

* ಶರತ್ ಹಂತಕರ ಬಂಧನಕ್ಕೆ ಆಗ್ರಹ; ಹೋರಾಟಕ್ಕೆ ಸಿದ್ಧ
ಈ ದೇಶಕ್ಕೋಸ್ಕರ ಮತ್ತು ಹಿಂದು ಸಮಾಜಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕೂ ಬಜರಂಗದಳ ಸಿದ್ಧವಿದೆ ಎಂದು ಬಜರಂಗದಳ ಪ್ರಾಂತ ಸಹ ಸಂಚಾಲಕ ರಘು ಸಕ್ಲೇಶ್‍ಪುರ ಹೇಳಿದರು.
ಪಿಎಫ್‍ಐ ಸಂಘಟನೆಯ ಜೊತೆ ಬಜರಂಗದಳವನ್ನು ತುಲನೆ ಮಾಡಲು ಹೋಗಬೇಡಿ. ನಮ್ಮದು ಶಾಂತಿಗಾಗಿ, ಹಿಂದು ಸಮಾಜಕ್ಕಾಗಿ ಹೋರಾಡುವ ಸಂಘಟನೆ. ದಕ್ಕೆಯಾಗಲು ಬಿಡುವುದಿಲ್ಲ. ಮುಖ್ಯಮಂತ್ರಿಗಳು ಇದನ್ನು ಅರಿತುಕೊಳ್ಳಬೇಕು. ಶರತ್ ಸಾವಿನ ಸಂದರ್ಭ 144 ಸೆಕ್ಷನ್ ಇದ್ದ ಕಾರಣ ಮೌನವಾಗಿದ್ದೆವು. ಇದೀಗ ಧರ್ಮಯುದ್ಧ ಸಾರುವ ಸಂದರ್ಭ ಬಂದಿದೆ. ಇಡೀ ಹಿಂದೂ ಸಮಾಜ ಒಂದಾಗಿ ಹೋರಾಟಕ್ಕೆ ಧುಮುಕಲಿದೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ಬಜರಂಗದಳದ ಕಾರ್ಯಕರ್ತರು ಶರತ್ ನ್ಯಾಯಕ್ಕಾಗಿ ಮಂಗಳೂರು ಚಲೋ ಅಭಿಯಾನಕ್ಕೆ ಸಿದ್ಧವಾಗಲಿದ್ದಾರೆ ಎಂದವರು ಹೇಳಿದರು.
ಪೊಲೀಸರು ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟು ಶರತ್ ಹಂತಕರನ್ನು ತಕ್ಷಣ ಬಂಧಿಸಬೇಕು ಎಂದು ರಘು ಒತ್ತಾಯಿಸಿದರು.
—
ಖಂಡನಾ ನಿರ್ಣಯ
1. ಶರತ್ ಮಡಿವಾಳ ಹತ್ಯಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕು.
2. ಹಿಂದು ನಾಯಕರುಗಳಾದ ಶರಣ್ ಪಂಪ್‍ವೆಲ್, ಸತ್ಯಜಿತ್ ಸುರತ್ಕಲ್, ಮುರಳಿಕೃಷ್ಣ ಹಸಂತಡ್ಕ, ಹರೀಶ್ ಪೂಂಜ, ಪ್ರದೀಪ್ ಪಂಪ್‍ವೆಲ್ ವಿರುದ್ಧ ದಾಖಲಾದ ಸುಳ್ಳು  ಮೊಕದ್ದಮೆಗಳನ್ನು ಕೂಡಲೇ ಹಿಂಪಡೆಯಬೇಕು.
3. ಹಿಂದು ನಾಯಕರುಗಳ ಮೇಲೆ ಗೂಂಡಾ ಕಾಯ್ದೆಯನ್ನು ಹೇರುವ ಪ್ರಯತ್ನವನ್ನು ತಕ್ಷಣ ಕೈಬಿಡಬೇಕು.
4. ರಾಜ್ಯ ಸರಕಾರ ಹಿಂದು ದಮನ ನೀತಿಯನ್ನು ನಿಲ್ಲಿಸಬೇಕು.
5. ಪೊಲೀಸ್ ಇಲಾಖೆಯಿಂದ ನಡೆಯುತ್ತಿರುವ ತಾರತಮ್ಯ ನೀತಿಯನ್ನು ತಕ್ಷಣ ನಿಲ್ಲಿಸಬೇಕು.
–
ಹಿಂದು ಸಮಾಜ ಚಿರಂಜೀವಿ
ಹಿಂದು ಸಮಾಜ ಎನ್ನುವುದು ಚಿರಂಜೀವಿ ಸಮಾಜ. ಕಳೆದ 2 ಸಾವಿರ ವರ್ಷಗಳಿಂದಲೂ ಈ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದರೂ ಅದು ಯಾರಿಂದಲೂ ಸಾಧ್ಯವಿಲ್ಲ. ಆದರೆ ಪ್ರಸ್ತುತ ಸರಕಾರ ಹಿಂದುಗಳ ಅಂತಃಶಕ್ತಿಯನ್ನು ಪರೀಕ್ಷೆ ಮಾಡುವ ಕಾರ್ಯ ಮಾಡುತ್ತಿದೆ. ಮತೀಯ ಶಕ್ತಿಗಳನ್ನು ಹದ್ದು ಬಸ್ತಿನಲ್ಲಿಡಲು ಹಿಂದೂ ಸಮಾಜ ಒಗ್ಗಟ್ಟಾಗುವುದು ಅನಿವಾರ್ಯವಾಗಿದೆ.ನಮ್ಮ ಬದ್ಧತೆ, ನಿಷ್ಠೆಯ ಆತುರತೆಯೇ ಕೆಲವೊಂದು ಅವಘಡಗಳಿಗೆ ಕಾರಣವಾಗುತ್ತಿದ್ದು, ಈ ಕುರಿತು ಎಚ್ಚರಿಕೆ ಅಗತ್ಯ.
-ನಾ.ಸೀತಾರಾಮ

By suddi9

Leave a Reply

Your email address will not be published. Required fields are marked *