ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ-ಮೂಡುಬಿದ್ರೆ ರಸ್ತೆ ನಡುವಿನ ಪೇಪರ್ಮಿಲ್ ಸಮೀಪದ ಮೋರಿಗೆ ಮಾರುತಿ ಕಾರು ಡಿಕ್ಕಿ ಹೊಡೆದ ಪರಿಣಾಮ ಸಿದ್ಧಕಟ್ಟೆ ಯುವ ಉದ್ಯಮಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ಸಿದ್ಧಕಟ್ಟೆ ಸಮೀಪದ ಮೊಯಿಲೊಟ್ಟು ನಿವಾಸಿ, ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಲೋಕೇಶ ಶೆಟ್ಟಿ ಇವರ ಪುತ್ರ ಎಂ.ರಾಕೇಶ ಶೆಟ್ಟಿ(33) ಎಂದು ಗುರುತಿಸಲಾಗಿದೆ. ಇವರು ಸಿದ್ಧಕಟ್ಟೆ ಹೋಟೆಲ್ ಉದ್ಯಮಿ ದಿನೇಶ ಶೆಟ್ಟಿಗಾರ್ ಎಂಬವರ ಮಾರುತಿ ಕಾರಿನಲ್ಲಿ ತನ್ನ ಸ್ನೇಹಿತ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಸುಧೀಂದ್ರ ಶೆಟ್ಟಿ ಕಲಾಯಿದಡ್ಡ ಇವರ ಜೊತೆಗೆ ಗುರುವಾರ ರಾತ್ರಿ ಸುಮಾರು 8.30ಗಂಟೆಗೆ ಮೂಡುಬಿದ್ರೆಯಿಂದ ಹಿಂತಿರುಗಿ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಪೈಕಿ ರಾಕೇಶ ಶೆಟ್ಟಿ ಅವರು ತಲೆಗೆ ಗಂಭೀರ ಗಾಯಗೊಂಡು ಸಾವನ್ನಿದ್ದರೆ, ಕಾರು ಚಲಾಯಿಸುತ್ತಿದ್ದ ದಿನೇಶ ಶೆಟ್ಟಿಗಾರ್ ಅವರ ಎಡಗೈ ಮತ್ತು ಸುಧೀಂದ್ರ ಶೆಟ್ಟಿ ಅವರ ಕಾಲಿಗೆ ಗಾಯಗೊಂಡು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರಂಭದಲ್ಲಿ ತಕ್ಷಣವೇ ಸ್ಥಳೀಯರು ಧಾವಿಸಿ ಬಂದು ಗಾಯಾಳುಗಳನ್ನು ಮೂಡುಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಮೃತ ರಾಕೇಶ ಶೆಟ್ಟಿ ಅವರು ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ವಿಷಯದಲ್ಲಿ ಎಂಜಿನಿಯರ್ ಪದವೀಧರರಾಗಿದ್ದು ಕೆಲವು ವರ್ಷ ಖಾಸಗಿ ಕಂಪೆನಿಯೊಂದರಲ್ಲಿ ಬೆಂಗಳೂರು ಮತ್ತು ಜಮ್ಮು-ಕಾಶ್ಮೀರ ಮತ್ತಿತರ ಕಡೆಗಳಲ್ಲಿ ದುಡಿದಿದ್ದರು. ಕಳೆದ ಎರಡು ವರ್ಷಗಳಿಂದ ಸಿದ್ಧಕಟ್ಟೆಯಲ್ಲಿ ಎಂ.ಜಿ.ಇಂಟರ್ಲಾಕ್ಸ್ ಸಂಸ್ಥೆ ನಡೆಸುತ್ತಾ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.
ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಸಿದ್ಧಕಟ್ಟೆ ಮೊಯಿಲೊಟ್ಟು ತೋಟದಲ್ಲಿ ನೆರವೇರಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ ಪೂಜಾರಿ ಮತ್ತಿತರರು ಇದ್ದರು.