ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕಲ್ಲಗುಡ್ಡೆ ಮತ್ತು ಸಣ್ಣಕುಕ್ಕು ಸೇರಿದಂತೆ ಮೊದಲಾದೆಡೆ ಕಂದಾಯ ಇಲಾಖೆ ಮೂಲಕ ಸುಮಾರು 37ಕ್ಕೂ ಮಿಕ್ಕಿ ಮಂದಿ ಅರ್ಹ ಫಲಾನುಭವಿಗಳಿಗೆ ಸರ್ಕಾರ ಹಕ್ಕುಪತ್ರ ನೀಡಿದ ಜನೀನನ್ನು ಸ್ಥಳೀಯ ಬಲಾಢ್ಯ ವ್ಯಕ್ತಿಗಳು ಅತಿಕ್ರಮಣಗೊಳಿಸಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆ ಬಳಸುತ್ತಿದ್ದಾರೆ ಎಂದು ಇಲ್ಲಿನ ಬಿಪಿಎಲ್ ಪಡಿತರ ಚೀಟಿದಾರರ ಸಂಘದ ಅಧ್ಯಕ್ಷ ಮುತ್ತಪ್ಪ ಕೋರ್ಯ ಆರೋಪಿಸಿದ್ದಾರೆ. IMG-20170911-WA0096
ಬಿ.ಸಿ.ರೋಡ್‍ನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಲ್ಲಿನ ಒಟ್ಟು 13 ಎಕ್ರೆ ಸರ್ಕಾರಿ ಜಮೀನಿನಲ್ಲಿ 4 ಎಕ್ರೆ ಜಮೀನು ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವುದಕ್ಕಾಗಿ ಮೀಸಲಿಡಲಾಗಿದೆ. ಇದರಿಂದಾಗಿ ಇಲ್ಲಿನ ಒಟ್ಟು 37 ಮಂದಿ ಫಲಾನುಭವಿಗಳಿಗೆ ಸರ್ಕಾರ ಹಕ್ಕುಪತ್ರ ನೀಡಿದ್ದರೂ ಅವರಿಗೆ ನಿವೇಶನ ಉಪಯೋಗಕ್ಕೆ ಸಿಕ್ಕಿಲ್ಲ. ಇಲ್ಲಿನ ಎಂಟು ಎಕ್ರೆ ಸರ್ಕಾರಿ ಜಮೀನನ್ನು ಅಕ್ರಮ ಸಕ್ರಮ ಯೋಜನೆಯಡಿ ಸ್ಥಳೀಯ ಕೆಲವೊಂದು ಪ್ರಭಾವಿ ವ್ಯಕ್ತಿಗಳು ಕಬಳಿಸಿದ್ದಾರೆ. ಈ ಬಗ್ಗೆ ಕಳೆದ ಐದು ವರ್ಷಗಳಿಂದ ಬಂಟ್ವಾಳ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಈ ಬಗ್ಗೆ ಸೂಕ್ರ ತನಿಖೆ ನಡೆಸಿ ಇಂತಹ ಜಮೀನನ್ನು ಅರ್ಹ ಫಲಾನುಭವಿಗಳಿಗೆ ಹಂಚಲು ಮತ್ತೆ ವಶಕ್ಕೆ ಪಡೆದು ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಲೋಕಾಯುಕ್ತ ಅಧಿಕಾರಿಗಳಿಗೂ ದೂರು ಸಲ್ಲಿಸಲಾಗಿದೆ ಎಂದ ಅವರು ಕೇವಲ ಈ ಗ್ರಾಮದಲ್ಲಿ ಮಾತ್ರವಲ್ಲ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹಕ್ಕು ಪತ್ರ ವಿತರಣೆಯಲ್ಲಿ ಗೋಲ್‍ಮಾಲ್ ನಡೆದಿದೆ ಎಂದು ಅವರು ಆರೋಪಿಸಿದರು.
ಇನ್ನೊಂದೆಡೆ ತಾಲೂಕಿನಲ್ಲಿ ಅಪಾರ ಮಂದಿ ಅರ್ಹ ಫಲಾನುಭವಿಗಳು ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಇದಕ್ಕೆ ಬದಲಾಗಿ ಆರ್ಥಿಕವಾಗಿ ಸ್ಥಿತಿವಂತರು ಮತ್ತು ಜಮೀನ್ದಾರರಿಗೆ ರಾಜಕೀಯ ಒತ್ತಡದಿಂದ ಬಿಪಿಎಲ್ ಪಡಿತರ ಚೀಟಿ ನೀಡಲಾಗಿದೆ. ಈ ನಡುವೆ ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಪಡಿತರರಿಂದ ರಶೀದಿ ಇಲ್ಲದೆ ರೂ 10 ಮೊತ್ತ ವಸೂಲಿ ಮಾಡಲಾಗುತ್ತಿದ್ದು, ತಲಾ ನಾಲ್ಕು ಕಿಲೋ ಬೆಳ್ತಿಗೆ ಅಕ್ಕಿ ವಾಪಾಸು ಪಡೆದು ಅವರಿಗೆ ಒಂದು ಕಿಲೋ ಕುಚ್ಲಕ್ಕಿ ವಿತರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲೆಯಾದ್ಯಂತ ಪಾಳು ಬಿದ್ದ ಕೃಷಿ ಜಮೀನಿನಲ್ಲಿ ಮತ್ತೆ ಕಡ್ಡಾಯವಾಗಿ ಭತ್ತ ಕೃಷಿ ನಡೆಸುವ ಅಗತ್ಯವಿದ್ದು, ಇದಕ್ಕಾಗಿ ನಮ್ಮ ಸಂಘದ ವತಿಯಿಂದಲೇ ಕೂಲಿ ಕಾರ್ಮಿಕರನ್ನು ಒದಗಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಜಮೀನಾಗಿ ಭೂಪರಿವರ್ತನೆಗೊಳಿಸದಂತೆ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗೆ ಶೀಘ್ರವೇ ಮನವಿ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಯಾದವ ಬಾಳ್ತಿಲ, ನಾಗೇಶ ಕೋರ್ಯ, ಕೇಶವ ಕಲ್ಲಡ್ಕ, ಸಂಕಪ್ಪ ಕೋರ್ಯ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *