ಭಾರತೀಯ ಜೈನ್ ಮಿಲನ್, ಬಂಟ್ವಾಳ ಶಾಖೆಯ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯು ವರ್ಷಂಪ್ರತಿಯಂತೆ ನಡೆಸಿಕೊಂಡು ಬಂದಿರುವ, ಬಂಟ್ವಾಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದು, ಮುಂದಕ್ಕೆ ವಿದ್ಯಾಭ್ಯಾಸ ಮುಂದುವರಿಸುವ ಜೈನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ‘ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವನ್ನು ಭಗವಾನ್ ಅನಂತನಾಥ ಸ್ವಾಮಿ ಜಿನಚೈತ್ಯಾಲಯ, ಪಾಣೆಮಂಗಳೂರು ಇಲ್ಲಿ ದಿನಾಂಕ 15-09-2017 ನೇ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಪವಿತ್ರ ಸೋಣ ತಿಂಗಳ ಶುಕ್ರವಾರದಂದು ಜರಗುವ ಈ ಕಾರ್ಯಕ್ರಮದ ಆತಿಥೇಯ ಮದಿಮೆತ್ತಿಮಾರ್ ಗುತ್ತುವಿನ ನಮಿರಾಜ್ ಜೈನ್ ಕುಟುಂಬಸ್ಥರು ವಹಿಸಿಕೊಂಡಿದ್ದರು.
ಮಿಲನ್ ಉಪಾಧ್ಯಕ್ಷರಾದ ವೀರ್ ಹರ್ಷರಾಜ್ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಮಾಸಿಕ ಸಭೆಯಲ್ಲಿ ವೀರಾಂಗನಾ ನವರತ್ನ ಧರಣೇಂದ್ರ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಈ ಸಭೆಯ ಉದ್ದೇಶ, ಕಳೆದ 20 ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿರುವ ವಿಚಾರ, ಇದಕ್ಕೆ ಯಾರೆಲ್ಲಾ ಸಹಕಾರ ನೀಡಿದ್ದಾರೆ ಎಂಬುವುದರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳ ಕಿರುಪರಿಚಯ ಹಾಗೂ ಅಭಿನಂದನಾ ಭಾಷಣವನ್ನು ಭಾರತೀಯ ಜೈನ್ ಮಿಲನ್ ವಲಯ 8 ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಇವರು ನಡೆಸಿಕೊಟ್ಟರು.
ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಮಂಗಳೂರು ಜೈನ್ ಮಿಲನ್ನ ಪೂರ್ವಾಧ್ಯಕ್ಷರಾದ ವೀರ್ ಯಶೋದರ ಪೋವಣಿ ಇವರು ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯವನ್ನು ನೆರವೇರಿಸಿ, ಮಕ್ಕಳಿಗೆ ಇಂದು ವಿದ್ಯೆ ಯಾಕೆ ಬೇಕು ಹಾಗೂ ವಿದ್ಯಾ ಧಾನದ ಬಗ್ಗೆ ಮಹತ್ವ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಲಯ 8 ರ ನಿರ್ದೇಶಕ ವೀರ್ ಸುದರ್ಶನ್ ಜೈನ್ ಇವರು ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲಾ ಶ್ರಾವಕ ಬಂಧುಗಳ ಕರ್ತವ್ಯ ಜವಾಬ್ದಾರಿ… ಇಂದಿನ ಕಾಲದಲ್ಲಿ ಸಮಾಜದಿಂದ , ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದು ಕರೆನೀಡಿದರು.
ಮತ್ತೋರ್ವ ಮುಖ್ಯ ಅಥಿತಿ , ಸಾಹಿತಿ ಬಿ.ವಿ.ಶೆಟ್ಟಿ, ಮಂಗಳೂರು ಈ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿರುವ ಮಿಲನ್ ಉಪಾಧ್ಯಕ್ಷ ವೀರ್ ಹರ್ಷರಾಜ್ ಬಲ್ಲಾಳ್ ಮುಂದೆ ನಡೆಸುವ ಸಾಮೂಹಿಕ ವೃತ ಸ್ವೀಕಾರದ ಬಗ್ಗೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ನಿರಂತರ ವಿದ್ಯಾರ್ಥಿ ಪುರಸ್ಕಾರಕ್ಕೆ ಸಹಕಾರ ನೀಡುತ್ತಿರುವ ಮಂಗಳೂರಿನ ಶ್ರೀ ರಾಜವರ್ಮ ಬಲ್ಲಾಳ್ ಮಂಗಳೂರು ಇವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಯಿತು. ಎಸ್.ಎಸ್.ಎಲ್.ಸಿ. ವಿಭಾಗದಲ್ಲಿ ಕುಮಾರಿ ರಿತಿಕಾ ಜೈನ್ ಕೊಯಕುಡೆ, ಕುಮಾರಿ ಲೋಲಾಕ್ಷಿ ಬುಡೋಳಿ, ಕುಮಾರಿ ಶುೃತ ಬಂಟ್ವಾಳ ಹಾಗೂ ಪಿ.ಯು.ಸಿ. ವಿಭಾಗದಲ್ಲಿ ಕುಮಾರಿ ಪ್ರತಿಜ್ಞಾ ವಾಮದಪದವು, ಕುಮಾರಿ ಪದ್ಮಶ್ರೀ ಬುಡೋಳಿ ಹಾಗೂ ದಿ| ಅನಂತ್ರಾಜ್ ಇಂದ್ರ ಇವರ ಸ್ಮರಣಾರ್ಥ ನೀಡುವ ಪದವಿ ಮಟ್ಟದ ಪುರಸ್ಕಾರವನ್ನು ಕುಮಾರಿ ಪ್ರಣಮ್ಯ ಎಸ್. ಜೈನ್ ಬಿನ್ ಸುರೇಶ್ ಕುಮಾರ್ ಬಿ.ಸಿ.ರೋಡ್ ಇವರುಗಳು ಪಡೆದರು.
ವೀರಾಂಗನಾ ಸನ್ಮತಿ ಎಸ್. ಚೌಟ ನಾವೂರ ಸ್ವಾಗತಿಸಿ, ವೀರಾಂಗನಾ ವಿಜಯಕುಮಾರಿ ಇಂದ್ರ ವಂದಿಸಿದ ಈ ಕಾರ್ಯಕ್ರಮವನ್ನು ಮಿಲನ್ ಕೋಶಾಧಿಕಾರಿ ವೀರ್ ಚಂದ್ರಕಾಂತ್ ಜೈನ್ ನಿರ್ವಹಿಸಿದರು.