ಬಂಟ್ವಾಳ:ಬದಲಾಗುತ್ತಿರುವ ಜಾಗತಿಕ ಕಾಲ ಘಟ್ಟದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆ ಎದುರಿಸಲು ಕ್ರೀಡಾ ಮನೋಭಾವನೆ ಮತ್ತು ಪಾಲ್ಗೊಳ್ಳುವಿಕೆಯ ಉತ್ಸಾಹ ಹೊಂದಿರಬೇಕು. ಇದರಿಂದಾಗಿ ವಾಮದಪದವಿನಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧನೆ ಸಾದಿಸಲು ಸಾಧ್ಯವಾಗುತ್ತದೆ ಎಂದು ಮೂಡುಬಿದ್ರೆ ಉದ್ಯಮಿ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅದಮಾರು ಮಠ ಎಚ್.ಎಚ್.ವಿಭುದೇಶ ತೀರ್ಥ ಸ್ವಾಮೀಜಿ ಸ್ಮರಣಾರ್ಥ ಶುಕ್ರವಾರ ಸಮಾರೋಪಗೊಂಡ ಪುರುಷರ ಹ್ಯಾಂಡ್‍ಬಾಲ್ ಪಂದ್ಯಾಟದಲ್ಲಿ ಅವು ಸಮಾರೋಪ ಭಾಷಣ ಮಾಡಿದರು.
ಪ್ರಮುಖರಾದ ಸಿ. ಶ್ರೀಧರ್ ಜಿ.ಪೈ, ನವೀನ್‍ಚಂದ್ರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಟ್ರೋಫಿ ಪ್ರಾಯೋಜಕ ಭೋಜರಾಜ ಶೆಟ್ಟಿ, ಕ್ರೀಡಾ ವಿಭಾಗ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ., ಪ್ರೊ. ಹರಿದಾಸ್ ಕೂಳೂರು, ಪಂದ್ಯಾಟದ ಸಂಚಾಲಕ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ರಾಧಾಕೃಷ್ಣ ಎಚ್.ಬಿ., ಕ್ರೀಡಾ ಸಂಘದ ಪದಾಧಿಕಾರಿಗಳಾದ ಪ್ರಜ್ವಲ್, ಚಿನ್ಮಯ ಮತ್ತಿತರರು ಇದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ಮೇರಿ ಎಂ .ಜೆ. ಸ್ವಾಗತಿಸಿದರು. ಉದಯ ಕುಮಾರ್ ಸಿ.ಆರ್. ವಂದಿಸಿದರು. ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ ವಿವರ:
ಪ್ರಾಥಮಿಕ ಹಂತದಲ್ಲಿ ಮಂಗಳೂರು ವಿ.ವಿ. ಕ್ಯಾಂಪಸ್ ತಂಡವು ಪ್ರಥಮ ಸ್ಥಾನ ಗೆದ್ದುಕೊಂಡು ಮೂಡುಬಿದ್ರೆ ಆಳ್ವಾಸ್ ದೈಹಿಕ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ. ಉಡುಪಿ ಪೂರ್ಣ ಪ್ರಜ್ಞ ಕಾಲೇಜು ತೃತೀಯ ಸ್ಥಾನ ಮತ್ತು ಪೂರ್ಣ ಪ್ರಜ್ಞ ಸಂಜೆ ಕಾಲೇಜು ಚತುರ್ಥ ಸ್ಥಾನ ಗೆದ್ದುಕೊಂಡಿದೆ.
ಚಾಂಪಿಯನ್ ಸುತ್ತಿನಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಗೆದ್ದುಕೊಂಡಿದ್ದು, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದ್ವಿತೀಯ ಸ್ಥಾನ ಗೆದ್ದುಕೊಂಡಿದೆ. ಸುರತ್ಕಲ್ ಗೋವಿಂದಾಸ್ ಕಾಲೇಜು ತೃತೀಯ ಸ್ಥಾನ ಮತ್ತು ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚತುರ್ಥ ಸ್ಥಾನ ಗೆದ್ದುಕೊಂಡಿದೆ.