ಬೆಳಗಾವಿ: ಕಾರುಗೊಂದು ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಅಧಿಕ ಮಂದಿಗೆ ಗಾಯಗೊಂಡ ದಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಹೊರವಲಯದ ಅಥಣಿ – ಗುಡ್ಡಾಪೂರ ರಸ್ತೆ ಬಳಿ ಶನಿವಾರ ತಡರಾತ್ರಿ ನಡೆದಿದೆ.
ಅಥಣಿ ತಾಲೂಕಿನ ಕಕಮರಿ ನಿವಾಸಿಗಳಾದ ಅಣ್ಣಪ್ಪ ಜಾಧವ್(40), ಅರ್ಚನಾ ಜಾಧವ್(35), ರಾಧಮ್ಮ ಜಾಧವ್(55), ರವಿ ಜಾಧವ್(12) ಮತ್ತು ಗೌರವ್ವ ಜಾಧವ್(75) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುಟುಂಬದ ಐವರು ಸೇರಿ ಒಟ್ಟು ಸುಮಾರು 16 ಮಂದಿ ಸಂಬಂಧಿಕರ ಅಂತ್ಯೆಕ್ರಿಯೆಗೆ ಕಾರಿನಲ್ಲಿ ಕಕಮರಿ ಗ್ರಾಮದಿಂದ ಅವರಕೋಡ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕೆಎಸ್ಸಾರ್ಟಿಸಿ ಬಸ್ ಬನ್ನೂರಿನಿಂದ ಅಥಣಿಗೆ ಬರುತ್ತಿದ್ದ ಬಸ್ ಚಿಕ್ಕೋಡಿಯ ಅಡ್ಡಹಳ್ಳಿ ಗ್ರಾಮದ ಬಳಿ ಕಾರಿಗೆ ಢಿಕ್ಕಿ ಹೊಡೆದಿದು ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಐಗಳಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
