mayawati

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯದಂತೆ ತಡೆಯಬೇಕಾಗಿದೆ.  ಎಲ್ಲ ಜನವರ್ಗದ ಕಲ್ಯಾಣಕ್ಕಾಗಿ ಬದ್ಧರಾಗಿರುವ ಎಚ್ ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಿ  ಸರ್ವರಿಗೂ ಸಮಪಾಲು ಸಿದ್ಧಾಂತದಂತೆ ಸರ್ಕಾರ ನಡೆಸಲು ಬಿಎಸ್ಪಿ ಮತ್ತು ಜೆಡಿಎಸ್ ಕೈ ಜೋಡಿಸಿವೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದರು.

 ಬೆಂಗಳೂರಿನ ಯಲಹಂಕದಲ್ಲಿ ಜೆಡಿಎಸ್  ಶನಿವಾರ ಆಯೋಜಿಸಿದ್ದ ವಿಕಾಸ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರ ಪರ  ಯಾವ ಯೋಜನೆಗಳನ್ನೂ ಜಾರಿಗೊಳಿಸಿಲ್ಲ. ಬಿಜೆಪಿಯಂತೂ ದಲಿತರು, ಶೋಷಿತರು, ಹಿಂದುಳಿದವರು, ಬಡವರಿಂದ ಬಹಳಷ್ಟು ಅಂತರ ಕಾಯ್ದುಕೊಂಡಿದೆ. ಬಿಜೆಪಿಯವರಿಗೆ ಜಾತಿ ಆಧಾರದ ಮೇಲೆ ಸಮಾಜವನ್ನು ವಿಭಜಿಸಿ ದೇಶ ಆಳುವುದು ಬೇಕಾಗಿದೆ. ಅದಕ್ಕಾಗಿ  ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯದಂತೆ ತಡೆಯಬೇಕಾದ ಜವಾಬ್ದಾರಿ ಮತದಾರರ ಮೇಲಿದೆ ಎಂದು ಮಾಯಾವತಿ ಹೇಳಿದರು.

ಕಾಂಗ್ರೆಸ್ ಕುತಂತ್ರದಿಂದಾಗಿಯೇ ಡಾ ಬಿಆರ್ ಅಂಬೇಡ್ಕರ್‌ ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಅಂಬೇಡ್ಕರ್‌ ಅವರಿಗೆ ಭಾರತರತ್ನ ಗೌರವವೂ ಕಾಂಗ್ರೆಸ್ ಕಾಲದಲ್ಲಿ ಸಿಗಲಿಲ್ಲ ಎಂದು ಮಾಯಾವತಿ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನುಡಿದಂತೆ ನಡೆದಿಲ್ಲ. ವಿದೇಶದಿಂದ ಕಪ್ಪು ಹಣ ವಾಪಸ್ ತರುವುದಾಗಿ ಹೇಳಿದ್ದ ಭರವಸೆಯೂ ಈಡೇರಿಲ್ಲ. ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಭರವಸೆ ನೀಡಿದ್ದ ಮೋದಿ ಈಗ ಪಕೋಡ ಮಾರಿ ಎನ್ನುತ್ತಿದ್ದಾರೆ ಎಂದು ಮಾಯಾವತಿ ವಾಗ್ದಾಳಿ ನಡೆಸಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಮತ್ತು  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,, ಜೆಡಿಎಸ್ ಮುಖಂಡರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *