ಮಂಗಳೂರು: ಇತಿಹಾಸ ಪ್ರಸಿದ್ಧ ಇಲ್ಲಿನ ಕುಡುಪು ಕ್ಷೇತ್ರದಲ್ಲಿ. ಫೆ.18ರಿಂದ 25ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.
ಫೆ. 25 ರಂದು ಬೆಳಗ್ಗೆ 6.45ರಿಂದ 7.45ರ ವರೆಗೆ ಶ್ರೀ ಅನಂತ ಪದ್ಮನಾಭ ದೇವರಿಗೆ ವೈಭವದ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಹೊರೆಕಾಣಿಕೆಯು ಸುಮಾರು 4 ಕೇಂದ್ರ ಸ್ಥಾನಗಳಿಂದ ಹಾಗೂ 30 ಉಪಕೇಂದ್ರಗಳಿಂದ ಹೊರೆಕಾಣಿಕೆ ಮೆರವಣಿಗೆಯು ನೆರವೇರಲಿದೆ. ಫೆ. 18, ಫೆ. 20, ಫೆ. 22ರಂದು ದೇವರಿಗೆ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಯೋಜಿಸಲಾಗಿದೆ.
ಸುಮಾರು 65 ಲ.ರೂ. ವೆಚ್ಚದಲ್ಲಿ ಅನನ್ಯವಾದ ಭೂಪುರ ಆಕೃತಿಯ ಭದ್ರಾ ಸರಸ್ವತಿ ತೀರ್ಥ ಪುಷ್ಕರಿಣಿ ನಿರ್ಮಾಣ ಗೊಂಡಿದೆ. 60 ಲ.ರೂ. ವೆಚ್ಚದಲ್ಲಿ ವಿಶೇಷ ವಿನ್ಯಾಸದ ಶಿಲಾ ಅಧಿಷ್ಠಾನ, ಕೆಂಪು ಕಲ್ಲಿನ ಗೋಡೆ ಹಾಗೂ ಹಿತ್ತಾಳೆಯ ಮುಚ್ಚಿಗೆ ಇರುವ ನೂತನ ದೈವಸ್ಥಾನ ರಚನೆಯಾಗಿದೆ.
4 ಕೋ. ರೂ. ವೆಚ್ಚದ ನೂತನ ಶಿಲಾ ಅಧಿಷ್ಠಾನ, ವಿಶೇಷ ಕೆತ್ತನೆಯ ಕೆಂಪು ಕಲ್ಲಿನ ಗೋಡೆ ಹಾಗೂ ನಾಲ್ಕು ಸುತ್ತಲೂ ತಾಮ್ರದ ಮುಚ್ಚಿಗೆ ಇರುವ ಸುತ್ತುಪೌಳಿ, ತಿರುವಾಂಕೂರು ಶೈಲಿಯ ಕುದುರೆ ಮಾಳಿಗೆಯಿರುವ ಗೋಪುರ ಸಹಿತ ದೇವಾಲಯವು ರಚನೆ ಗೊಂಡಿದೆ. ಹಾಗೂ ಸುಮಾರು 1.35 ಕೋ.ರೂ. ವೆಚ್ಚದ ಇತರ ಕಾಮ ಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಮುಂದಿನ ಯೋಜನೆಯಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಉತ್ತರ ದಿಕ್ಕಿನ ಗೋಪುರ ನಿರ್ಮಾಣ ಹಾಗೂ ನಾಗಬನ ನವೀಕರಣ ಜರಗಲಿದೆ.
ಬ್ರಹ್ಮಕಲಶೋತ್ಸವದ ಅಂಗವಾಗಿ ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಮೂಲಕ ಈ ಶತಮಾನದ ಅಪರೂಪದ ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರದ ಭಕ್ತವೃಂದ ಸಾಕ್ಷಿಯಾಗಲಿದೆ.
