ಮಂಗಳೂರು: ದೇಶದ್ರೋಹಿಗಳಿಂದ ರಕ್ಷಣೆ ಮತ್ತು ದೇಶದ್ರೋಹಿಗಳನ್ನು ಬೆಂಬಲಿಸುವ ವ್ಯಕ್ತಿಗಳು, ಸರಕಾರದ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ಕುಶಾಲನಗರದಿಂದ ಅಂಕೋಲ ತನಕ ಬಿಜೆಪಿ ‘ರಾಜ್ಯ ರಕ್ಷಣೆಗಾಗಿ ಕರ್ನಾಟಕ ಸುರಕ್ಷಾ ಯಾತ್ರೆ’ ಹಮ್ಮಿಕೊಳ್ಳಲಿದೆ.
ರಾಜ್ಯದ ಬಿಜೆಪಿ ಪ್ರಭಾರಿ ಮುರಳೀಧರ ರಾವ್ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಾತ್ರೆಯ ವಿವರಗಳನ್ನು ಪ್ರಕಟಿಸಿದರು. ಮಾ.೩ರಂದು ಹೊರಡುವ ಯಾತ್ರೆಯ ಸಮಾರೋಪ ಮಾ.೬ರ ಸಂಜೆ ಮಂಗಳೂರಿನಲ್ಲಿ ನಡೆಯಲಿದೆ. ಸಮಾರೋಪ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ರಾವ್ ತಿಳಿಸಿದರು.
ಮಾರ್ಚ್ ೩ರಂದು ಅಂಕೋಲ ಮತ್ತು ಕುಶಾಲನಗರದಿಂದ ಕರ್ನಾಟಕ ಸುರಕ್ಷಾ ಯಾತ್ರೆ ಹೊರಡಲಿದೆ. ಮಧ್ಯೆ ಮಡಿಕೇರಿ, ಸುಳ್ಯ, ಪುತ್ತೂರು, ಕಲ್ಲಡ್ಕ, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಕಾಪು, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ ಮತ್ತು ಕುಮುಟದಲ್ಲಿ ಯಾತ್ರೆ ಸಂಚರಿಸಲಿದೆ ಎಂದು ಮುರಳೀಧರ ರಾವ್ ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸತ್ ಸದಸ್ಯರಾದ ನಳಿನ್ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಮತ್ತು ಪ್ರತಾಪಸಿಂಹ ಕರ್ನಾಟಕ ಸುರಕ್ಷಾ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ ಎಂದು ಮುರಳೀಧರ ರಾವ್ ನುಡಿದರು.
ಸಂಸತ್ ಸದಸ್ಯರಾದ ನಳಿನ್ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
