ಶಿವಮೊಗ್ಗ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ “ಬಾಲ ಗೌರವ ಪ್ರಶಸ್ತಿ”ಗೆ ಬಾಲಕ ಅಂತಃಕರಣನನ್ನು ಆಯ್ಕೆ ಗೊಳಿಸಲಾಗಿದೆ.
ಮುಂದಿನ ದಿನಗಳಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಅಂತಃಕರಣನಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಗರದ ಲೋಯಲಾ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಃಕರಣ, ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 352 ಅಂಕಣ ಪ್ರಬಂಧ, 93 ಕವಿತೆ, 78 ಕತೆ, 1 ನಾಟಕ ಮತ್ತು 4 ಕಾದಂಬರಿಗಳನ್ನು ರಚಿಸಿದ್ದಾನೆ. ಅಲ್ಲದೆ, 24 ಪುಸ್ತಕಗಳನ್ನು ಪ್ರಕಟಿಸಿದ್ದಾನೆ.
ಅಂತಃಕರಣ ರಾಜ್ಯಮಟ್ಟದ 3ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿದ್ದ. 2016ರಲ್ಲಿ ವಿಜಯ ನೆಕ್ಸ್ಟ್ ಪತ್ರಿಕೆ ಆಯ್ಕೆ ಮಾಡಿದ ಕರ್ನಾಟಕದ 14 ಪ್ರತಿಭಾವಂತ ಮಕ್ಕಳಲ್ಲೊಬ್ಬನಾಗಿ, ‘ಚೂಟಿ ಚೇತನ-2017’ ಎಂದು ಕನ್ನಡಪ್ರಭ ಪತ್ರಿಕೆ ಆಯ್ಕೆ ಮಾಡಿದ ಕರ್ನಾಟಕದ 9 ಪ್ರತಿಭಾವಂತ ಮಕ್ಕಳಲ್ಲೊಬ್ಬನಾಗಿ, ‘ಸಾಧನೆಯ ಶಿಖರ ಏರಿರುವ ಕರ್ನಾಟಕದ 6 ಪ್ರಖರ ಪ್ರತಿಭಾವಂತ ಮಕ್ಕಳು’ ಎಂದು ‘ವಿಜಯ ಕರ್ನಾಟಕ’ ಪತ್ರಿಕೆ ಆಯ್ಕೆ ಮಾಡಿದ ಮಕ್ಕಳಲ್ಲೊಬ್ಬನಾಗಿ ಅಂತಃಕರಣ ಆಯ್ಕೆಯಾಗಿದ್ದ. ಅಂತಃಕರಣನಿಗೆ ಆತನ ‘ಅಸಾಧಾರಣ ಪ್ರತಿಭೆ’ಗಾಗಿ ರಾಷ್ಟ್ರಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರವು ಶಿಫಾರಸ್ಸು ಮಾಡಿತ್ತು.
ಅಂತಃಕರಣನಿಗೆ ‘ವಿದ್ಯಾಸಾಗರ ಬಾಲ ಪುರಸ್ಕಾರ-2014’, ‘ಬೇಂದ್ರೆ ಗ್ರಂಥ ಬಹುಮಾನ-2015’, ‘ಆರುಡೋ ಯುವ ಸಾಧಕ ಪ್ರಶಸ್ತಿ-2015’ ಮತ್ತಿತರ ಪ್ರಶಸ್ತಿಗೆ ಭಾಜನರಾಗಿದ್ದಾನೆ.
