ಹಾವೇರಿ: ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರು ಕಾಂಗ್ರೆಸ್ ಟಿಕೆಟ್ ಹಂಚುವ ಪರಿಸ್ಥಿತಿ ಬಂದಿದೆ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಇಲ್ಲಿನ ಕಾಗಿನೆಲ್ಲಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ್ ಟೆನ್ ಪರ್ಸೆಂಟ್ ಸರ್ಕಾರ ಅಂತಾ ಮೋದಿ ಹೇಳಿದ್ದರು. ಆಗ ಸಿದ್ದರಾಮಯ್ಯರವರು ದಾಖಲೆ ಇದ್ದರೆ ಕೊಡಿ ನಮ್ಮ ಸರ್ಕಾರ ಕಪ್ಪು ಚುಕ್ಕೆ ಇಲ್ಲದ ಸರ್ಕಾರ ಅಂತಾ ಸಮರ್ಥನೆ ಮಾಡಿಕೊಂಡಿದ್ದರು. ಇವತ್ತು ಸ್ವತಃ ಕಾಂಗ್ರೆಸ್ ಪಕ್ಷದ ವಿರುಪ್ಪ ಮೋಯ್ಲಿಯವರು ಸ್ಪಷ್ಟವಾಗಿ PWD ಗುತ್ತಿಗೆದಾರರು ಕಾಂಗ್ರೆಸ್ ಟಿಕೆಟ್ ಹಂಚುವ ಪರಿಸ್ಥಿತಿ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಸರ್ಕಾರ ನೈಜ ಬಂಡವಾಳ ಹೊರ ಬಿದ್ದಿದೆ ಎಂದು ಟೀಕಿಸಿದರು.
ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ, ಖೇಣಿ ಎಂಬ ಗುತ್ತಿಗೆದಾರ ಕಾಂಗ್ರೆಸ್ ಗೆ ಬರೋದೆ ಗೊತ್ತಿಲ್ಲ ಎಂದಿದ್ದರೆ, ಇವತ್ತು ಕಾಂಗ್ರೆಸ್ ಖೇಣಿ ಅಂತಹ ಭ್ರಷ್ಟರ ಮತ್ತು ಕಂಟ್ರಾಕ್ಟರ್ ಕೈಯಲ್ಲಿ ಇದೆ ಅಂತಾ ಮೋಯ್ಲಿಯವರು ಹೇಳುತ್ತಿದ್ದಾರೆ. ಇದಕ್ಕೆ ಉತ್ತರ ಕೊಡಿ, ಅದನ್ನು ಬಿಟ್ಟು ಉಡಾಫೆ ಉತ್ತರ ಕೊಡಬೇಡಿ ಎಂದು ಈಶ್ವರಪ್ಪ ಸಿದ್ದರಾಮಯ್ಯರವರನ್ನು ತರಾಟೆ ತೆಗೆದುಕೊಂಡರು..
