ದಿಲ್ಲಿ: ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಮಾರ್ಕೆಟ್ ಗಳಲ್ಲಿ ಯಾವುದೇ ತೊಂದರೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಿಲ್ಲಿಯಲ್ಲಿ ಆಯೋಜಿಸಿದ್ದ ಪುಸಾ ಕೃಷಿ ಸಂಕಿರಣದಲ್ಲಿ ಕೃಷಿ ಉನ್ನತಿ ಮೇಳ 2018ನ್ನುದ್ದೇಶಿಸಿ ಅವರು ಮಾತನಾಡಿದರು.
ರೈತರಿಗೆ ಬೆಂಬಲ ಬೆಲೆ ನೀಡಲು ರಾಜ್ಯಗಳೊಂದಿಗೆ ಕೇಂದ್ರಸರ್ಕಾರ ಕಾರ್ಯೋನ್ಮುಖವಾಗಿದ್ದು, ಉತ್ಪಾದನಾ ವೆಚ್ಚದಲ್ಲಿ 1.5 ರಂತೆ ಬೆಂಬಲ ಬೆಲೆ ನೀಡಲಾಗುತ್ತಿದೆ. ರೈತರ ಆದಾಯ ದುಪ್ಪಟ್ಟುಗೊಳ್ಳಲಿದೆ ಎಂದು ತಿಳಿಸಿದರು.
ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಹಾಗೂ ಉತ್ಪನ್ನ ವೆಚ್ಚವನ್ನು ನಿರ್ಧರಿಸಲಿದ್ದು, 2022ರವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳ್ಳಲಿದೆ. ರೈತರು ತೈಲೋತ್ಪನ್ನಗಳನ್ನು ಹೆಚ್ಚಿಗೆ ಬೆಳೆಯುವ ಮೂಲಕ ದೇಶ ಅಡುಗೆ ಅನಿಲವನ್ನು ಆಮದಿಗಾಗಿ ಬೇರೆ ದೇಶವನ್ನು ಅವಲಂಬಿಸಿರುವುದನ್ನು ತಪ್ಪಿಸಬೇಕೆಂದು ಕರೆ ನೀಡಿದರು.
2022 ರ ವೇಳೆಗೆ ಯೂರಿಯಾ ಬಳಕೆ ಪ್ರಮಾಣವನ್ನು ಕನಿಷ್ಠ ಅರ್ಧದಷ್ಟಾದರೂ ತಗ್ಗಿಸಬೇಕು. ಬೆಳಗಳಿಗೆ ಬೆಂಕಿ ಹಚ್ಚುವುದಿಂದ ವಾಯುಮಾಲಿನ್ಯ ಹಾಗೂ ಭೂಮಿ ಸಾರ ಕಳೆದುಹೋಗುವುದರಿಂದ ಇದನ್ನು ತಡೆಗಟ್ಟುವಂತೆ ರೈತರಿಗೆ ಪ್ರಧಾನಿ ಮನವಿ ಮಾಡಿದರು.
ಈ ವೇಳೆ ಜೈವಿಕ ಖೇಥಿ ಪೋರ್ಟಲ್ ಬಿಡುಗಡೆಗೊಳಿಸಿದ ಪ್ರಧಾನಿ 25 ಕೃಷಿ ವಿಜ್ಞಾನ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
