gur-may-10-munir

ವಾಮಂಜೂರು: ಜನರ ಬದುಕಿನ ನೈಜ ಕಷ್ಟಗಳಿಗೆ ಸ್ಪಂದಿಸದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು, ಪ್ರತಿ ಬಾರಿಯೂ ಜನರ ದಾರಿ ತಪ್ಪಿಸುತ್ತಿದೆ. ಶ್ರೀಮಂತ ಉದ್ಯಮಿಗಳೇ ತುಂಬಿರುವ ಈ ಪಕ್ಷಗಳು ಕಾರ್ಮಿಕ ವರ್ಗ, ಬಡವರ ಅಭ್ಯುದಯದ ಪರವಾಗಿಲ್ಲ ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿನ ಪ್ರಮುಖ ಜಂಕ್ಷನ್ ನಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇಂದು ಕಾಂಗ್ರೆಸ್ಸಿನಲ್ಲಿದ್ದವರು ನಾಳೆ ಬಿಜೆಪಿಯಲ್ಲಿ, ನಿನ್ನೆ ಬಿಜೆಪಿಯಲ್ಲಿದ್ದವರು ಇಂದು ಕಾಂಗ್ರೆಸ್ಸಿನಲ್ಲಿರುತ್ತಾರೆ. ಹಾಗಾಗಿ ಎರಡೂ ಪಕ್ಷದವರು ಸಮಾಜಕ್ಕೆ ಕಂಟಕಪ್ರಾಯರಾಗಿದ್ದಾರೆ ಎಂದು ಟೀಕಿಸಿದರು.

ಕೇಂದ್ರದ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಎಂಟು ಕೋಟಿ ಉದ್ಯೋಗ ಸೃಷ್ಟಿಸುವ ಬದಲಿಗೆ ಒಂದೂವರೆ ಕೋಟಿ ಉದ್ಯೋಗ ನಷ್ಟಗೊಳಿಸಿದೆ. ಕಪ್ಪು ಹಣ ಬಂದಿಲ್ಲ. ಜಿಎಸ್‍ಟಿ ಜಾರಿಯಾದರೂ ಹಣದುಬ್ಬರ ನಿಂತಿಲ್ಲ. ತೈಲ ಬೆಲೆ, ಗ್ಯಾಸ್ ಬೆಲೆ ಏರುತ್ತಲೇ ಇದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ಹಣ ಗಳಿಸುವ ಒಂದೇ ಉದ್ದೇಶ ಇಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಮೊಯಿದ್ದೀನ್ ಬಾವಾ ಹಾಗೂ ಡಾ. ಭರತ್ ಕುಮಾರ್ ಶೆಟ್ಟಿ ರಾಜಕೀಯ ಗಂಭೀರತೆ ಮತ್ತು ಅರ್ಹತೆ ಹೊಂದಿಲ್ಲ. ಇಬ್ಬರಲ್ಲೂ ಸಾಕಷ್ಟು ಹಣ ಬಲವಿದೆ. ನಮ್ಮದು ಬಡವರ ಪಕ್ಷ. ಹಿಂದೆಯೂ, ಮುಂದೆಯೂ ಬಡವರು, ಕಾರ್ಮಿಕರ ಪರ ಹೋರಾಡುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದು ನುಡಿದರು.

ಈ ಭಾಗದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರ, ಪದವಿ ಕಾಲೇಜು ಅಥವಾ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗೊಳ್ಳದೆ ವಂಚಿತವಾಗಿದ್ದು, ಈ ದಿಸೆಯಲ್ಲಿ ಸಿಪಿಐಎಂ, ಡಿವೈಎಫ್‍ಐ ನಿರಂತರ ಹೋರಾಟ ನಡೆಸಲಿದೆ. ಆದ್ದರಿಂದ  ಬಾರಿಯ ಚುನಾವಣೆಯಲ್ಲಿ ತನ್ನನ್ನು ಆಶೀರ್ವಾದಿಸಿ ಗೆಲ್ಲಿಸಬೇಕು ಎಂದು ವಿನಂತಿಸಿದರು.

ಸಭೆಯಲ್ಲಿ ಸಿಪಿಐಎಂ ಧುರೀಣ ಯು.ಬಿ. ಲೋಕಯ್ಯ, ಬಿ.ಕೆ .ಇಮ್ತಿಯಾಝ್, ಸದಾಶಿವದಾಸ್, ಗಂಗಯ್ಯ ಅಮೀನ್, ದಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮನೋಜ್ ಸ್ವಾಗತಿಸಿ, ವಂದಿಸಿದರು.

gur-may-10-munir-2

By suddi9

Leave a Reply

Your email address will not be published. Required fields are marked *