ಕೋಲಾರ: ಕೋಲಾರ ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿ ಸಾರ್ವಜನಿಕರ ಜೀವನವನ್ನು ಉಳಿಸಬೇಕು ಹಾಗೂ ಸರ್ಕಾರದಿಂದ ಬರುವ ರಸ್ತೆಗಳ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೀರಾವರಿ ಹೋರಾಟ ಸಮಿತಿ ಹಾಗೂ ಕನ್ನಡ ಪರ ಸಂಘಗಳು, ರೈತ ಸಂಘಟನೆಗಳು ಮತ್ತು ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳು ಶನಿವಾರ ಜಿಲ್ಲಾಧಿಕಾರಿ ಜಿ. ಸತ್ಯವತಿಯವರಿಗೆ ಮನವಿ ಸಲ್ಲಿಸಿದೆ.
ಕೋಲಾರ ನಗರಾದ್ಯಂತ ಪ್ರಮುಖ ರಸ್ತೆಗಳಾದ ಕ್ಲಾಕ್ ಟವರ್ ಕೆ.ಇ.ಬಿ. ವೃತ್ತ, ಇಟಿಸಿಎಂ ರಸ್ತೆ, ಮೆಕ್ಕೆ ವೃತ್ತ, ಪಲ್ಲವಿ ಸರ್ಕಲ್ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ, ಕೋಟ್ ಸರ್ಕಲ್ (ಯು.ಜಿ.ಡಿ.) ಮುಂತಾದ ಪ್ರಮುಖ ರಸ್ತೆಗಳು ಸಮರ್ಪಕವಾಗಿ ಅಭಿವೃದ್ಧಿಪಡಿಸದೆ ಹಾಳಾಗಿದ್ದು, ರಸ್ತೆಗಳು ಬೃಹದಾಕಾರದ ಹಳ್ಳಕೊಳ್ಳಗಳಿಂದ ಕೂಡಿದ್ದು, ದ್ವಿಚಕ್ರ ವಾಹನ ಮತ್ತು ಪಾದಚಾರಿಗಳಿಗೆ ಮೃತ್ಯುಕೂಪಗಳಾಗಿವೆ ಎಂದು ನಿಯೋಗದಲ್ಲಿ ತೆರಳಿದ್ದ ಸಂಘಟನೆಯ ಮುಖಂಡರುಗಳು ಆರೋಪಿಸಿದರು.
ಈ ರಸ್ತೆಗಳಲ್ಲಿ ಬಸ್ಸು, ಕಾರುಗಳು ಸಂಚಾರ ಮಾಡುವಾಗ ರಸ್ತೆಗಳಲ್ಲಿರುವ ಜಲ್ಲಿಕಲ್ಲುಗಳು ವಾಹನ ಚಕ್ರಗಳ ಅಂಚಿಗೆ ಸಿಕ್ಕಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಬಿದ್ದು ಪ್ರಾಣಹಾನಿಯ ಜೊತೆಗೆ ಕೈಕಾಲು ಮುರಿದುಹೋಗುತ್ತಿದೆ. ಇಂತಹ ಸನ್ನಿವೇಶಗಳು ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿರುತ್ತದೆ. ಈ ಎಲ್ಲಾ ಅಭಿವೃದ್ಧಿಗಳಿಗೆ ಸರ್ಕಾರದಿಂದ ಬರುವ ರಸ್ತೆಗಳ ಅನುದಾನವನ್ನು ಸಮರ್ಪಕವಾಗಿ ಬಳಸದೆ ನಗರಸಭೆಯ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದರು.
ಈಗಾಗಲೇ ಕೋಲಾರ ನಗರದಲ್ಲಿ ಬಹಳಷ್ಟು ರಸ್ತೆಗಳು ಅಮೃತ್ಸಿಟಿ ಯೋಜನೆಯಡಿಯಲ್ಲಿ ಯು.ಜಿ.ಡಿ. ಪೈಪ್ಲೈನ್ಗಳನ್ನು ಅಳವಡಿಸಲು ಕೊರೆದಿದ್ದ ಹಳ್ಳಗಗಳನ್ನು ಸರಿಯಾಗಿ ಮುಚ್ಚದೆ ಹಾಗಯೇ ಉಳಿದುಕೊಂಡು ಜನರಿಗೆ ರಸ್ತೆಯಲ್ಲಿ ಅಡ್ಡಾವುದು ದುಸ್ತರವಾಗಿದೆ. ಹಾಗೂ ಸರಿಯಾದ ರೀತಿಯಲ್ಲಿ ಅದನ್ನು ಡಾಂಬರೀಕರಣ ಮಾಡುತ್ತಿಲ್ಲ ಬೇಸರ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸತ್ಯವತಿ ಮಾತನಾಡಿ, ಆದಷ್ಟು ಬೇಗ ಸೋಮವಾರ ನಗರಸಭೆಯ ಹಾಗೂ ಪಿಡಬ್ಲೂಡಿ ಅಧಿಕಾರಿಗಳ ಸಭೆಯನ್ನು ಕರೆದು ಶೀಘ್ರವೇ ಸಮಸ್ಯೆಯನ್ನು ಬಗೆಹರಿಸುವಂತೆ ಆದೇಶ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದಕ್ಕೆ ಜಗ್ಗದ ಹೋರಾಟಗಾರರು ಇನ್ನು ಹತ್ತು ದಿನಗಳಲ್ಲಿ ರಸ್ತೆಗಳ ಡಾಂಬರೀಕರಣವನ್ನು ಮಾಡದಿದ್ದಲ್ಲಿ ನಗರಸಭೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಿಂಹಸೇನೆಯ ಜಯದೇವ ಪ್ರಸನ್ನ, ಡಾ. ಶಿವಣ್ಣ, ನೀರಾವರಿ ಹೋರಾಟ ಸಮಿತಿಯ ಸಂಚಾಲಕರಾದ ಕುರುಬರಪೇಟೆ ವೆಂಕಟೇಶ್, ಅಹಿಂದ ರಕ್ಷಣಾ ವೇದಿಕೆಯ ಅಹಿಂದ ಮಂಜುನಾಥ್, ರೈತ ಸಂಘದ ನಾರಾಯಣಗೌಡ, ಪುರುಷೋತ್ತಮ್, ಕರ್ನಾಟಕ ರಕ್ಷಣಾ ವೇದಿಕೆಯ ಚಂಬೇರಾಜೇಶ್, ಕೋಡಿಹಳ್ಳಿ ಚಂದ್ರಶೇಖರ್ ಬಣದ ಅಬ್ಬಣಿ ಶಿವಪ್ಪ, ಪೋ. ನಂಜುಂಡಸ್ವಾಮಿ ಬಣದ ರಾಮುಶಿವಣ್ಣ, ನಾರಾಯಣಸ್ವಾಮಿ, ಕಾರ್ತಿಕ್, ಚೇತನ್ಬಾಬು, ಮುಜೀಬ್ ಪಾಷ, ಲೋಕೇಶ್, ಬಾಬು, ಜಬೀವುಲ್ಲಾ, ನಿಜಾಂ, ಅಸೀಬ್, ಹಾರೋನ್, ವಾಸವಿ ಸಮಾಜದ ಬದ್ರಿ, ಹಾರೋಹಳ್ಳಿ ಕಾರ್ತಿಕ್, ಕಂಟ್ರಾಕ್ಟರ್ ಪಾಲ್(ಬಂಗಾರಿ), ವಕೀಲ ಕೆ. ನರೇಂದ್ರಬಾಬು ಮತ್ತಿತರರಿದ್ದರು.
