ಮೂಡುಬಿದಿರೆ: ಅಸಾಧಾರಣ ವಾಗ್ಮಿ, ಅತ್ಯುತ್ತಮ ಸಂಸದೀಯ ಪಟುವಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಜಾತಿ, ಹಣ, ಪ್ರಭಾವ ಕುಟುಂಬಿಕ ಹಿನ್ನಲೆಯಿಲ್ಲದೆ ಸ್ವ ಪರಿಶ್ರಮದಿಂದಲೇ ಉನ್ನತ ಶಿಬಿರಕ್ಕೇರಿದ ಆದರ್ಶ ವ್ಯಕ್ತಿಯಾಗಿದ್ದರು. ಆರ್ಥಿಕ ತಜ್ಞರಲ್ಲದಿದ್ದರೂ ಆರ್ಥಿಕ ತಜ್ಞರಿಗೆ ಯೋಜನೆ ರೂಪಿಸಲು ಸದಾ ಪ್ರೋತ್ಸಾಹಿಸುತ್ತಿದ್ದು ಅವರು ಜಿಎಸ್‍ಟಿಯ ಬೀಜ ಬಿತ್ತಿದವರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಡುಬಿದಿರೆ ಸಂಘ ಚಾಲಕ ಎಂ. ವಾಸಿದೇವ ಭಟ್ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಾರಾಯಣಗುರು ಸಭಾಭವನದಲ್ಲಿ ಶುಕ್ರವಾರ ನಡೆದ ಅಟಲ್ ಬಿಹಾರಿ ವಾಜಪೇಯಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
ಸರ್ವ ಶಿಕ್ಷಣ ಅಭಿಯಾನ, ಸುವರ್ಣ ಚತುಷ್ಪಥ ಯೋಜನೆಯ ಜಾರಿ, ಪೋಖ್ರಾನ್ ಅಣು ಸ್ಫೋಟ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅವರು ಕೈಗೊಂಡ ದಿಟ್ಟ ಕ್ರಮಗಳನ್ನು ಬಣ್ಣಿಸಿದ ಅವರು ಉತ್ತರದ ಗಂಗಾ ನದಿಯೊಂದಿಗೆ ದಕ್ಷಿಣದ ಕಾವೇರಿಯನ್ನು ಜೋಡಿಸುವ ಯೋಜನೆ ರೂಪಿಸಿರುವುದನ್ನು ಅವರು ನೆನಪಿಸಿದರು. ಅಟಲ್ ಬುದ್ಧ, ಗಾಂಧೀಜಿ ಸಾಲಿಗೆ ಸೇರುವ ಮಹಾನ್ ಮಾನವತಾವಾದಿಯಾಗಿದ್ದರು ಎಂದು ಸ್ಮರಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಆರ್‍ಎಸ್‍ಎಸ್ ಸ್ವಯಂ ಸೇವಕರಾಗಿ, ಪತ್ರಕರ್ತರಾಗಿ, ಪ್ರಧಾನಿಯಾಗಿ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ವಿವೇಕಾನಂದ ಕಾಮತ್ ಮಾತನಾಡಿದರು. ರೋಹನ್ ಅತಿಕಾರಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.