ಮೂಡುಬಿದಿರೆ: ಸಮಾಜ ಮಂದಿರ ಸಭಾ ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಸಮಾಜ ಮಂದಿರದಲ್ಲಿ ಅಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಮರ್ಪಣೆಯ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಚತೆ ವಹಿಸಿದ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ, ಕಠಿಣ ಪರಿಸ್ಥಿತಿಯಲ್ಲೂ ಶಿಸ್ತು, ಸಂಯಮ ಕಾಯ್ದುಕೊಂಡಿದ್ದ ವಾಜಪೇಯಿಯವರು ಮೃದು ಮನಸ್ಸು ಹೊಂದಿದ್ದರೂ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯದ ಮಹಾನ್ ನಾಯಕ. ಕಾರ್ಗಿಲ್ ವಿಜಯೋತ್ಸವಕ್ಕೆ ಸೈನಿಕರಿಗೆ ಸ್ಫೂರ್ತಿಯಾಗಿದ್ದ ವಾಜಪೇಯಿಯವರು ಬಹುಮತಕ್ಕಾಗಿ ಅಡ್ಡಹಾದಿ ಹಿಡಿಯದೇ ಸಜ್ಜನಿಕೆಯ ರಾಜಕಾರಣ ಮಾಡಿದ ನಿಜವಾದ ಭಾರತ ರತ್ನ ಎಂದು ಹೇಳಿದರು.
1999ರಲ್ಲಿ ವಾಜಪೇಯಿಯವರನ್ನು ಮಂಗಳೂರಿನಲ್ಲಿ ಭೇಟಿಯಾಗಿ ಧನ್ಯತಾಭಾವ ಹೊಂದಿದ ನೆನಪನ್ನು ಅವರು ಹಂಚಿಕೊಂಡರು.
ವಾಜಪೇಯಿಯವರು ಉನ್ನತ ಸ್ಥಾನಕ್ಕೇರಿ ವಿಶ್ವ ಮಾನ್ಯತೆ ಗಳಿಸಿದರೂ ವಾಸಕ್ಕೊಂದು ಸ್ವಂತ ಮನೆಯನ್ನೂ ಮಾಡಿಕೊಳ್ಳದ ಮಹಾನ್ ನೇತಾರ ಎಂದು ಡಾ. ಎಂ. ಮೋಹನ ಆಳ್ವ ಅವರು ಹೇಳಿದರು. ಡಾ.ವಿ.ಎಸ್. ಆಚಾರ್ಯ ಜತೆಗೆ ತಾವು ಆಟಲ್ ಬಿಹಾರಿ ವಾಜಪೇಯಿ ಅವರ ಭೇಟಿ ಮತ್ತು ಸೇವೆಯ ಅವಕಾಶ ಪಡೆದುಕೊಂಡ ಕ್ಷಣಗಳನ್ನು ಅವರು ಸ್ಮರಿಸಿಕೊಂಡರು.
ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಾಜಪೇಯಿಯವರು ವಿಶ್ವ ಮಾರ್ಗದರ್ಶಿ ವ್ಯಕ್ತಿತ್ವದವರಾಗಿದ್ದು ಚತುಷ್ಪಥ ರಸ್ತೆಗಳ ವಿಷಯದಲ್ಲಿ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಮಹಾನ್ ನಾಯಕ. ಅವರ ಮನೋಧರ್ಮ ಆದರ್ಶವಾಗಿದೆ ಎಂದು ಬಣ್ಣಿಸಿದರು.
ರೋಟರಿ ಅಧ್ಯಕ್ಷ ಡಾ.ರಮೇಶ್ ಮಾತನಾಡಿ, ಶಿಕ್ಷಣ, ಅರ್ಥವ್ಯವಸ್ಥೆ, ವಿಜ್ಞಾನ, ರಕ್ಷಣೆ ಮತ್ತು ಅಂತಾರಾಷ್ಟ್ರೀಯ ಬಾಂಧವ್ಯದ ಕ್ಷೇತ್ರದಲ್ಲಿ ದೇಶದ ಘನತೆಯನ್ನು ವಾಜಪೇಯಿ ಉತ್ತುಂಗಕ್ಕೇರಿಸಿದವರು. ಡಾ.ಕಲಾಂರಂಥಹ ಶ್ರೇಷ್ಠ ರಾಷ್ಟ್ರಪತಿಯನ್ನು ದೇಶಕ್ಕೆ ನೀಡಿದ ಶ್ರೇಷ್ಠ ರಾಜಕಾರಣಿ ಎಂದರು. ಲಯನ್ಸ್ ಮಾಜಿ ಅಧ್ಯಕ್ಷ ವೆಲೆರಿಯನ್ ಸಿಕ್ವೇರಾ ಅವರು ವಾಜಪೇಯಿ ಅಧಿಕಾರಕ್ಕೋಸ್ಕರ ರಾಜಕಾರಣ ಮಾಡದ ರಾಜಧರ್ಮ ಪಾಲನೆಯನ್ನು ತೋರಿಸಿಕೊಟ್ಟವರು ಎಂದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ಪುಂಡಿಕಾೈ ಗಣಪಯ್ಯ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಗಣ್ಯರೂ ಸೇರಿದಂತೆ ಸೇರಿದ ಸಾರ್ವಜನಿಕರಿಂದ ಆಟಲ್ ಬಿಹಾರಿ ವಾಜಪೇಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
