ಮೂಡುಬಿದಿರೆ: ಕರ್ನಾಟಕ ರಾಜ್ಯ ಸರ್ಕಾರ ಕನಿಷ್ಟ ಕೂಲಿ ಕಾಯಿದೆಯಡಿ ಸರ್ವಾನುಮತದಿಂದ ಘೋಷಿಸಲಾಗಿತ್ತು. ಅದರಂತೆ ಬೀಡಿ ಕಾರ್ಮಿಕರಿಗೆ ಕಳೆದ ಏ. 1ರಿಂದ ಸಾವಿರ ಬೀಡಿಗೆ ರೂ. 210ನ್ನು ನೀಡಬೇಕಾಗಿರುವುದನ್ನು ಬೀಡಿ ಕಂಪೆನಿ ಮಾಲಿಕರು ಕೊಡದೆ ಸತಾಯಿಸುತ್ತಿರುವುದು ಸರಿಯಲ್ಲ. ಇದಕ್ಕಾಗಿ ಸಿಐಟಿಯು, ಎಐಟಿಯುಸಿ, ಬಿಎಂಎಸ್ ಮತ್ತು ಎಚ್ಎಂಎಸ್ನೊಂದಿಗೆ ಸಂಯೋಜಿತವಾಗಿರುವ ಬೀಡಿ ಕಾರ್ಮಿಕರ ಸಂಘಟಗಳು ಜಂಟಿಯಾಗಿ ಅ. 11ರಿಂದ 13ವರೆಗೆ ಪ್ರಚಾರ ಜಾಥಾ ಹಮ್ಮಿಕೊಂಡಿದೆ. ಇದೇ ಅ. 23ರಂದು ಮಂಗಳೂರಿನ ಎರಡು ಪ್ರಮುಖ ಬೀಡಿ (ಭಾರತ್ , ಗಣೇಶ್) ಕಂಪೆನಿಗಳ ಆಡಳಿತ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಠಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹ ಏರ್ಪಡಿಸಲಾಗುವುದು ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ತಿಳಿಸಿದರು.

ಮೂಡಬಿದಿರೆ ಬಸ್ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ `ಬೀಡಿಗೆ ಕನಿಷ್ಟ ಕೂಲಿ ಜಾರಿಗೊಳಿಸಲು ಒತ್ತಾಯಿಸಿ ನಡೆದ ಪ್ರಚಾರ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಅಧ್ಯಕ್ಷ , ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಸಿಪಿಎಂ ಜಿಲ್ಲಾ ಉಪಾಧ್ಯಕ್ಷೆ ರಮಣಿ, ಸಿಐಟಿಯು ಪ್ರಮುಖರಾದ ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ)ನ ಜಿಲ್ಲಾ ಮುಖಂಡರಾದ ಕರುಣಾಕರ, ಶೇಖರ್, ಸ್ಥಳಿಯರಾದ ರಾಧಾ, ಲಕ್ಷ್ಮಿ, ಬೇಬಿ ಮುಂತಾದವರು ಭಾಗವಿಹಿಸಿದ್ದರು.
ವೇಣೂರಿನಿಂದ ಆಗಮಿಸಿದ್ದ ದ.ಕ. ಜಿಲ್ಲಾ ಮಟ್ಟದ ವಾಹನ ಪ್ರಚಾರಜಾಥಾವನ್ನು ಸ್ಥಳೀಯ ಮುಖಂಡರು ಬರಮಾಡಿಕೊಂಡರು. ಕಾರ್ಯಕರ್ತರು ಆಶಯಗೀತೆ ಹಾಡಿದರು. ಸಭೆಯ ಬಳಿಕ ವಾಹನ ಜಾಥಾ ಮೂಡಬಿದಿರೆಯಿಂದ ಕೈಕಂಬದತ್ತ ಸಾಗಿತು.