ಮೂಡುಬಿದಿರೆ: ಜನರಲ್ಲಿ ಪರಸ್ಪರ ಸಂಪರ್ಕದಿಂದ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಕನೆಕ್ಟ್ ಮೂಡುಬಿದಿರೆ ಎನ್ನುವ ಡೈರೆಕ್ಟರಿ ಮತ್ತುಆಂಡ್ರಾಯ್ಡ್ ಆ್ಯಪ್ ಮೂಡುಬಿದಿರೆ ಮತ್ತು ಹೊರಗಿನ ಎಲ್ಲ ಆಸಕ್ತರಿಗೂ ಮೂಡುಬಿದಿರೆಯ ಸಂಪರ್ಕವನ್ನು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಬೆರಳ ತುದಿಯಲ್ಲಿ ಕ್ಷಣಮಾತ್ರದಲ್ಲಿ ನೀಡುವ ಮೂಲಕ ಪ್ರಗತಿಗೆ ಕೊಡುಗೆ ನೀಡಿದಂತಾಗಿದೆ. ಈ ಮೂಲಕ ಉದ್ಯೋಗಾವಕಾಶಗಳು, ಜನತೆಗೆ ಯೋಗ್ಯ ಸೇವಾ ಸೌಲಭ್ಯಗಳು, ರಕ್ತದಾನ, ತುರ್ತು ಸೇವೆ, ಆಪತ್ಭಾಂಧವ ಕಾರ್ಯದ ನೆರವು ಒಳಿತನ್ನುಂಟುಮಾಡಲಿ ಎಂದು ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜಿ ನುಡಿದರು.
ಇಲ್ಲಿನ ಸಾವಿರ ಕಂಬದ ಬಸದಿಯ ಭೈರಾದೇವಿ ಮಂಟಪದಲ್ಲಿ ಮೂಡುಬಿದಿರೆಯ ಸಮಗ್ರ ಸಂಪರ್ಕ ಮಾಹಿತಿ,ಉಪಯುಕ್ತ ವಿವರಗಳನ್ನೊಳಗೊಂಡ ಕನೆಕ್ಟ್ ಮೂಡುಬಿದಿರೆ ಡೈರೆಕ್ಟರಿಯ ಲೋಕಾರ್ಪಣೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಕನೆಕ್ಟ್ ಮೂಡುಬಿದಿರೆ ಆಂಡ್ರಾಯ್ಡ್ ಆ್ಯಪ್ ಲೋಕಾರ್ಪಣೆ ನೆರವೇರಿಸಿ ಶುಭ ಹಾರೈಸಿದರು.
ಚೌಟರ ಅರಮನೆಯ ಕುಲದೀಪ ಎಂ, ಲಯನ್ಸ್ ಜಿಲ್ಲಾ 2ನೇ ಉಪರಾಜ್ಯಪಾಲ ಡಾ.ಗೀತಪ್ರಕಾಶ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಕೆ. ನಿತ್ಯಾನಂದ ಶೆಟ್ಟಿ, ಜೇಸೀ ಅಧ್ಯಕ್ಷೆ ಸಂಗೀತಾ ಎಂ. ಪ್ರಭು, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ವಿನ್ಸೆಂಟ್ ಡಿ.ಕೋಸ್ತಾ, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಮೇಶ್, ಪ್ರಭಾತ್ ಸಿಲ್ಕ್ಸ್‍ನ ಪ್ರಭಾತ್‍ಚಂದ್ರ ಜೈನ್, ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು.
ಕನೆಕ್ಟ್ ಮೂಡುಬಿದಿರೆಯ ಪ್ರಧಾನ ಸಂಪಾದಕ ನವೀನ್ ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ಸ್ವಾಗತಿಸಿದರು. ಆಂಡ್ರಾಯ್ಡ್ ಆ್ಯಪ್ ರೂಪಿಸುವಲ್ಲಿ ಸಹಕರಿಸಿದ ಅಲ್ಫಾಜ್, ಹಾಗೂ ಸಹಕರಿಸಿದ ಪ್ರಮುಖರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
