ಕುಪ್ಪೆಪದವು: ಅಂಗಡಿಗೆ ನುಗ್ಗಿದ ಕಳವು ಆರೋಪಿಯೋರ್ವನನ್ನು ಸಾರ್ವಜನಿಕರು ರೆಡ್ಹ್ಯಾಂಡ್ ಆಗಿ ಹಿಡಿದು ಯದ್ವಾತದ್ವಾ ಹಲ್ಲೆ ನಡೆಸಿ ಬಜಪೆ ಪೊಲೀಸರಿಗೊಪ್ಪಿಸಿದ ಘಟನೆ ಗುರುಪುರ ಕೈಕಂಬದಲ್ಲಿ ನಿನ್ನೆ ನಡೆದಿದ್ದು, ಪರಿಣಾಮ ಹಲ್ಲೆಗೊಳಗಾದ ಆರೋಪಿ ಗಂಭೀರ ಗಾಯಗೊಂಡಿದ್ದಾನೆ. ಅಮ್ಮುಂಜೆ ಕಲಾಯಿ ಎಂಬಲ್ಲಿಯ ಹಬೀಬ್ ರೆಹಮಾನ್ ಎಂಬಾತ ಕಳವಿಗೆ ಯತ್ನಿಸಿ ಸಾರ್ವಜನಿಕರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಎಂದು ತಿಳಿದುಬಂದಿದ್ದು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ವಿವರ: ಆರೋಪಿ ಹಬೀಬ್ ರೆಹಮಾನ್ ನಿನ್ನೆ ಬೆಳಿಗ್ಗೆ ಸುಮಾರು 9.30ರ ಸುಮಾರಿಗೆ ಗುರುಪುರ ಕೈಕಂಬದಲ್ಲಿರುವ ಅಲ್ಯೂಮಿನಿಯಂ ಅಂಗಡಿಯೊಂದರ ಮಹಡಿಯಲ್ಲಿ ದಾಸ್ತಾನಿರಿಸಲಾಗಿದ್ದ ಹಳೆಯ ಅಲ್ಯೂಮಿನಿಯಂ ಪಾತ್ರೆಗಳನ್ನು ಕಂಡು, ಮಹಡಿ ಏರಿ ಹಳೆಪಾತ್ರೆಗಳನ್ನು ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಈತನ ಕೃತ್ಯವನ್ನು ಗಮನಿಸಿದ ಸಾರ್ವಜನಿಕರು ಈತನಲ್ಲಿದ್ದ ಹಳೆ ಪಾತ್ರೆಗಳನ್ನು ವಶಕ್ಕೆ ಪಡೆದಿದ್ದರು. ಕಳವು ಆರೋಪಿ ಸಿಕ್ಕಿಬಿದ್ದ ಸುದ್ದಿ ಎಲ್ಲಡೆ ಹಬ್ಬುತ್ತಿದ್ದಂತೆ ಧಾವಿಸಿದ ಇನ್ನಷ್ಟು ಸಾರ್ವಜನಿಕರು ಹಿಡಿದು ಯದ್ವಾತದ್ವಾ ಹಲ್ಲೆಗೊಳಿಸಿದ್ದಾರೆ. ಕೆಲವರು ಕಬ್ಬಿಣದ ರಾಡ್ನಿಂದಲೂ ಹಲ್ಲೆಗೊಳಿಸಿದ ಪರಿಣಾಮ ಹಬೀಬ್ ರೆಹಮಾನ್ ಗಂಭೀರ ಗಾಯಗೊಂಡಿದ್ದಾನೆ.
ಈ ಬಗ್ಗೆ ಮಾಹಿತಿ ದೊರೆತ ತಕ್ಷಣ ಧಾವಿಸಿದ ಬಜಪೆ ಪೊಲೀಸರು ಹಬೀಬ್ನನ್ನು ವಶಕ್ಕೆ ಪಡೆದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳವು ಆರೋಪದ ಮೇರೆಗೆ ಹಬೀಬ್ ಮೇಲೆ ಪ್ರಕರಣ ದಾಖಲಾದರೆ, ಮಾರಣಾಂತಿಕ ಹಲ್ಲೆಗೊಳಿಸಿದ ಸಾರ್ವಜನಿಕರ ವಿರುದ್ಧವೂ ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಬೀಬ್ ವಿರುದ್ಧ ಈ ಮುಂಚೆ ಕದ್ರಿ ಹಾಗೂ ಪಾಂಡೇಶ್ವರ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲ್ಲೆಗೆ ಆಕ್ರೋಶ
ಆರೋಪಿ ಹಬೀಬ್ ರೆಹಮಾನ್ ಒಂದಷ್ಟು ಹಳೆಯ ಅಲ್ಯೂಮಿನಿಯಂ ಸಾಮಗ್ರಿಗಳನ್ನು ಕದಿಯಲೆತ್ನಿಸುತ್ತಿದ್ದಂತೆ ರೆಡ್ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೊಪ್ಪಿಸಬೇಕಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಅದರ ಬದಲಿಗೆ ಸಾರ್ವಜನಿಕರು ಹಬೀಬ್ಗೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಇದೀಗ ಹಬೀಬ್ ಆಸ್ಪತ್ರೆಗೆ ದಾಖಲಾಗಿಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದು, ಹಲ್ಲೆ ನಡೆಸಿದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಕಳವು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸುವ ಬದಲು ರಾಡ್ನಂಥಾ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
