ಮೋದಿಯಿಂದ ಏಕ್ ಭಾರತ್ ಶ್ರೇಷ್ಠ್ ಭಾರತ್ ಮೂಲಕ ದೇಶಭಕ್ತಿ ಜಾಗೃತಿ
ಕೈಕಂಬ:ಭಾರತದಲ್ಲಿ ಧರ್ಮ, ದೇವರು, ಸಾಧು-ಸಂತರು ಇತ್ಯಾದಿಗಳಿಗೆ ಕೊರತೆ ಇರದಿದ್ದರೂ ಭಾರತೀಯರಿಗೆ ದೇಶಭಕ್ತಿಯ ಕೊರತೆ ಇರುವುದು ಕಂಡುಬರುತ್ತಿದೆ. ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂದ ವಿವೇಕಾನಂದರ ವಾಣಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಚುರಪಡಿಸುವ ಮೂಲಕ ಭಾರತೀಯರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುತ್ತಿದ್ದಾರೆ. ನಮ್ಮ ಉನ್ನತಿಯಾಗಬೇಕಾದರೆ ಮೊದಲು ನಮ್ಮ ಪರಿಚಯ ನಮಗಾಗಬೇಕು. ಆದರೆ ಹೆಚ್ಚಿನವರಿಗೆ ತಮ್ಮ ಪರಿಚಯವೇ ಇರುವುದಿಲ್ಲ. ತಮ್ಮ ಪರಿಚಯ ಆದ ವ್ಯಕ್ತಿಗೆ ಸೂಕ್ತ ವ್ಯಕ್ತಿತ್ವ ರೂಪುಗೊಂಡು ಆತ ದೇಶಕ್ಕೆ ದೊಡ್ಡ ಆಸ್ತಿಯಾಗಬಲ್ಲನು ಎಂದು ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.
ವಜ್ರದೇಹಿ ಮಠ ಗುರುಪುರದ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ವಜ್ರದೇಹಿ ಜಾತ್ರೆಯ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.ವಿಶ್ವ ಹಿಂದೂ ಪರಿಷತ್ ಮುಖಂಡ ಎಂ.ಬಿ. ಪುರಾಣಿಕ್ ಮಾತಾಡಿ, ಸಾವಿರಾರು ವರ್ಷ ಇತಿಹಾಸ ಇರುವ ಅಯ್ಯಪ್ಪ ದೇವಸ್ಥಾನವನ್ನು ಪಿಕ್‍ನಿಕ್ ಸೆಂಟರ್ ಆಗಿ ಪರಿವರ್ತಿಸಲು ಯತ್ನಿಸಲಾಗುತ್ತಿದೆ. ಅಯ್ಯಪ್ಪ ದೇವಸ್ಥಾನಕ್ಕೆ ತೆರಳಬೇಕಾದರೆ ಹಲವಾರು ಕಟ್ಟುಪಾಡುಗಳಿದ್ದು, ಇವುಗಳನ್ನು ಪ್ರಗತಿಪರರು, ಬುದ್ಧಿಜೀವಿಗಳು, ಧರ್ಮದ್ರೋಹಿಗಳು ಉಲ್ಲಂಘಿಸುತ್ತಿದ್ದಾರೆ. ದೇವಸ್ಥಾನಗಳು ಸಂವಿಧಾನದ ಕಟ್ಟುಪಾಡಿಗೆ ಬರದಿದ್ದರೂ ಸರಕಾರ ಇದರಲ್ಲಿ ವಿನಾಕಾರಣ ಹಸ್ತಕ್ಷೇಪ ನಡೆಸುತ್ತಿದೆ. ಆದರೆ ಹಿಂದೂ ಧರ್ಮದ ಕಟ್ಟುಪಾಡುಗಳೇ ಸರಕಾರದ ಹಸ್ತಕ್ಷೇಪಕ್ಕೊಳಗಾಗುತ್ತಿರುವುದು ದುರದೃಷ್ಟಕರ ಎಂದರು.
ಸಮ್ಮಾನ ಸ್ವೀಕರಿಸಿ ಮಾತಾಡಿದ ಖ್ಯಾತ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ ಮಾತಾಡಿ, ನನ್ನ ಸಾಧನೆಯನ್ನು ಗುರುತಿಸಿ ಹಲವರು ನನ್ನನ್ನು ಸಮ್ಮಾನಿಸಿದ್ದರೂ, ಧಾರ್ಮಿಕ ಕ್ಷೇತ್ರದಲ್ಲಿ ನೀಡಿರುವ ಸಮ್ಮಾನ ನಿಜಕ್ಕೂ ಶ್ರೇಷ್ಠ. ಸುಮಾರು ಹತ್ತು ವರ್ಷಗಳ ಮುಂಚೆ ವಜ್ರದೇಹಿ ಸ್ವಾಮೀಜಿಗಳು ತಮ್ಮ ಮುಂದಿನ ಉನ್ನತಿಯ ಬಗ್ಗೆ ಭವಿಷ್ಯ ನುಡಿದಿದ್ದರು. ಅದೀಗ ಸಾಕಾರಗೊಂಡಿದೆ ಎಂದರು. ಹಿರಿಯರಾದ ಮಂಜುನಾಥ ಭಂಡಾರಿ ಮೂಡುಶೆಡ್ಡೆ ಮಾತಾಡಿ, ಈ ದೇಶಕ್ಕೆ ಸಾಧುಸಂತರು ಗಣನೀಯ ಕೊಡುಗೆ ಸಲ್ಲಿಸಿದ್ದಾರೆ. ಈ ಪೈಕಿ ವಜ್ರದೇಹಿಗಳ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರನ್ನೂ ಒಟ್ಟುಸೇರಿಸಿ ಮುನ್ನಡೆಸುವ ಕಲೆ ಸ್ವಾಮೀಜಿಯವರಲ್ಲಿದ್ದು ಅವರ ಕಾರ್ಯಶೈಲಿ ನಿಜಕ್ಕೂ ಅಭಿನಂದನೀಯ ಎಂದರು.

ಆರ್ಶೀವಚನ ನೀಡಿ ಮಾತಾಡಿದ ವಜ್ರದೇಹಿ ರಾಜಶೇಖರಾನಂದ ಸ್ವಾಮಿ ಮಾತಾಡಿ, ವೇದ, ಉಪನಿಷತ್, ಪುರಾಣ, ಭಾಗವತ ಮುಂತಾದವುಗಳನ್ನು ಹೊಂದಿರುವ ಭಾರತ ನಿಜಕ್ಕೂ ಪುಣ್ಯಭೂಮಿ. ಇವುಗಳಲ್ಲಿ ಸುಸೂತ್ರ ಜೀವನ ಶೈಲಿ, ಮೋಕ್ಷಪ್ರಾಪ್ತಿ, ಧರ್ಮತತ್ಪರತೆ, ಭಕ್ತಿ, ಜ್ಞಾನ, ಕರ್ಮಗಳ ಮೂಲಕ ಮೋಕ್ಷಪ್ರಾಪ್ತಿಯ ಬಗೆಯನ್ನು ತಿಳಿಸಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಜರಂಗದಳ ಪ್ರಾಂತಸಂಚಾಲಕ ಸುನಿಲ್ ಕೆ.ಆರ್., ಕಂಡೇಶ್ ಭಾಸ್ಕರ್ ವೈ. ಶೆಟ್ಟಿ ಮಾತನಾಡಿದರು.
ಹನುಮ ಪ್ರಶಸ್ತಿ: ವಿರಾರ್ ಶಂಕರ್ ಶೆಟ್ಟಿ(ಸಂಘಟನೆ), ಸುಬ್ರಹ್ಮಣ್ಯ ಭಟ್ ದಂಪತಿ(ಪಾಕಶಾಸ್ತ್ರ), ಕಿಶೋರ್ ವಾಮಂಜೂರು(ರಂಗಭೂಮಿ ಕಲಾವಿದ) ಇವರಿಗೆ ಹನುಮ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಕ್ಷೇತ್ರದ ಪವಿತ್ರಪಾಣಿ ಅರುಣ್ ಭಟ್ ಖಂಡಿಗೆ ಪ್ರಾರ್ಥಿಸಿದರು. ಹರೀಶ್ ಶೆಟ್ಟಿ ಸ್ವಾಗತಿಸಿದರು.

