ಬಂಟ್ವಾಳ: ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಕೋರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ದೆಹಲಿಗೆ ತೆರಳಿದ್ದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ನಿಯೋಗದಲ್ಲಿದ್ದ ಕೆಲ ಸದಸ್ಯರು ಮದ್ಯಪಾನ ಮಾಡಿ ನಾಡಿನ ಮರ್ಯಾದೆಗೆ ಮಸಿ ಬಳಿದಿರುವುದು ಖಂಡನೀಯ ಎಂದು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ತಿಳಿಸಿದ್ದಾರೆ.ಮಾತು ಮಾತಿಗೂ ಕನ್ನಡ ಎನ್ನುತ್ತಿದ್ದ ಕನ್ನಡಾಭಿಮಾನಿ ಸಾಹಿತಿಗಳ ನಿಜ ಬಣ್ಣ ಬಯಲಾಗಿದೆ. ಕನ್ನಡಕ್ಕಾಗಿ ಹೋರಾಟ ಮಾಡಬೇಕಾದರು ಕುಡಿದು ಗದ್ದಲ ಮಾಡಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡಿಗರ ಮಾನ ಹರಜಾಗುವಂತೆ ಮಾಡಿದ್ದಾರೆ. ಕನ್ನಡದ ಕೆಲಸಕ್ಕೆಂದು ದೆಹಲಿಗೆ ತೆರಳಿ ಕುಡಿದು ತೂರಾಡಿದ ಈ ನಕಲಿ ಕನ್ನಡಾಭಿಮಾನಿ ಸಾಹಿತಿಗಳಿಂದ ಕನ್ನಡಿಗರು ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. 

ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ಮೂಲಕ ಸರಕಾರಿ ಶಾಲೆ ಉಳಿಸ ಬೇಕು, ಸರಕಾರಿ ಶಾಲೆ ಉಳಿಸುವ ಮೂಲಕ ಕನ್ನಡವನ್ನು ಉಳಿಸ ಬೇಕು ಎನ್ನುವ ಹೋರಾಟವನ್ನು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಮಾಡಿಕೊಂಡು ಬರುತ್ತಿದೆ. ಆದರೆ ಈ ಕಪಟ ಕನ್ನಡಾಭಿಮಾನಿ ಸಾಹಿತಿಗಳು ಅದಕ್ಕೆ ತೀವ್ರ ವಿರೊಧ ವ್ಯಕ್ತಪಡಿಸುತ್ತಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಸರಕಾರಿ ಶಾಲೆಗಳ ಉಳಿವಿಗಾಗಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ದಿಟ್ಟ ನಿರ್ಧಾರವನ್ನು ಪ್ರಕಟಿಸಿದ ತಕ್ಷಣವೇ ಈ ಬೆರಳೆಣಿಕೆಯ ಕನ್ನಡಾಭಿಮಾನಿ ಸಾಹಿತಿಗಳು ಸಭೆ ನಡೆಸಿ ಯಾವುದೇ ಕಾರಣಕ್ಕೂ ಆಂಗ್ಲ ಮಾಧ್ಯಮ ಆರಂಭಿಸ ಬಾರದು, ಮಾಡಿದ್ದಲ್ಲಿ ಗೊಕಾಕ್ ಮಾದರಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಸರಕಾರದ ಮೇಲೆ ಒತ್ತಡ ತಂದಿದ್ದರು.
ಸರಕಾರಿ ಶಾಲೆಗಳನ್ನು ಉಳಿಸ ಬೇಕಾದವರು ತಮ್ಮ ಅಂಧಾಭಿಮಾನದ ಮೂಲಕ ಸರಕಾರಿ ಶಾಲೆಗಳ ಅಳಿವಿಗೆ ಕಾರಣರಾಗಿದ್ದಾರೆ. ಒಂದೇ ಒಂದು ಸರಕಾರಿ ಶಾಲೆ ಉಳಿಸಲು ಪ್ರಯತ್ನಿಸದ ಈ ಕನ್ನಡಾಭಿಮಾನಿಗಳು ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದ ಕಲಿಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವ್ಢೇಕರ್ ಎಷ್ಟು ಮಂದಿ ಸಾಹಿತಿಗಳ ಮಕ್ಕಳು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ಪ್ರಶ್ನಿಸಿದಾಗ ತಲೆ ತಗ್ಗಿಸಿದ ಇಂತಹ ಸಾಹಿತಿಗಳಿಂದ ಕನ್ನಡ, ಸರಕಾರಿ ಶಾಲೆ ಉಳಿಸಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿರುವ ಪ್ರಕಾಶ್ ಅಂಚನ್ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಿ ಬಡ ಮಕ್ಕಳು ಮಾತ್ರ ಇಂಗ್ಲೀಷ್ ಕಲಿಯದೇ ಇನ್ನೂ ಹಳೆ ಪರಂಪರೆಯಲ್ಲಿಯೇ ಮುಂದುವರೆಯೆಬೇಕೆನ್ನುವುದು ಇವರ ತಂತ್ರ, ಕನ್ನಡ ಕನ್ನಡ ಎನ್ನುತ್ತಿದ್ದವರು ಕುಡಿದು ಗದ್ದಲವೆಬ್ಬಿಸಿ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿರುವುದು, ತಮ್ಮ ಮೋಜು ಮಸ್ತಿಗಾಗಿ ಕರ್ನಾಟಕ ಭವನವನ್ನು ದುರುಪಯೋಗ ಪಡಿಸಿಕೊಂಡಿರುವುದು ಖಂಡನೀಯ.
ಆದ್ದರಿಂದ ಈ ನಿಯೋಗದ ನೇತೃತ್ವ ವಹಿಸಿದ್ದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೋ. ಎಸ್.ಜಿ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಗಳು ತಕ್ಷಣ ಆ ಸ್ಥಾನದಿಂದ ವಜಾಗೊಳಿಸ ಬೇಕೇಂದು ಅವರು ಆಗ್ರಹಿಸಿದ್ದಾರೆ. ತಪ್ಪಿದ್ದಲ್ಲಿ ಕನ್ನಡಾಭಿಮಾನಿಗಳು ಸೇರಿಸಿ ಕೊಂಡು ಹೋರಾಟ ನಡೆಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.