ಕೈಕಂಬ:ಮಂಗಳೂರು ತಾಲೂಕಿನ ಗಂಜಿಮಠವು ಮೊಗರು ಕುಕ್ಕಟ್ಟೆ ಮೂಲಕ ಮುತ್ತೂರು ಮಾರ್ಗದಂಗಡಿಯನ್ನು ಸಂರ್ಪಸುವ ಪ್ರಮುಖ ರಸ್ತೆಯಾಗಿದ್ದು ಜಿಲ್ಲಾ ಪ್ರಮುಖ ರಸ್ತೆಯಾಗಿದೆ. ಸುಮಾರು 5 ಕಿ.ಮಿ ಉದ್ದದ ಈ ರಸ್ತೆ ವಾಹನ ಸವಾರರಿಗೆ ತೀರಾ ಅಪಾಯಕಾರಿಯಾಗಿದೆ. ಈ ರಸ್ತೆಯಲ್ಲಿ ಕೆಲವು ಅಪಘಾತಗಳು ನಡೆದಿದ್ದು ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ನಾರ್ಲಪದವಿನಲ್ಲಿರುವ ಅಪಾಯಕಾರಿ ತಿರುವು ಹಲವು ಅಪಘಾತಗಳಿಗೆ ಕಾರಣವಾಗಿದೆ.
ಕಳೆದ ತಿಂಗಳಲ್ಲಿ ಇಲ್ಲಿ ವಾಹನವೊಂದು ಮಗುಚಿ ಬಿದ್ದು ಪ್ರಯಾಣಿಕರು ಕೊದಳೆಲೆ ಅಂತರದಲ್ಲಿ ಪಾರಾಗಿದ್ದರು. ಈ ತಿರುವಿನ ಒಂದು ಭಾಗ ಆಳವಾಗಿದ್ದು ಇಲ್ಲಿ ತಡೆಗೋಡೆ ನಿರ್ಮಿಸಿ ತಿರುವನ್ನು ಅಗಲಗೊಳಿಸುವ ಅಗತ್ಯವಿದೆ. ಕುಕ್ಕಟ್ಟೆ ಅರ್ಬಿ ಎಂಬಲ್ಲಿರುವ ಕಿರುಸೇತುವೆ ತೀರಾ ಅಗಲ ಕಿರಿದ್ದಾಗಿದ್ದು ಅಪಾಯಕಾರಿ ಸ್ಥಿತಿಯಲ್ಲಿ ಇದು ಕೂಡ ವಾಹನಗಳು ಅಪಘಾತಕ್ಕೀಡಾಗುವ ಸ್ಥಳವಾಗಿದೆ.
ಅಲ್ಲದೆ ಈ ರಸ್ತೆಯಲ್ಲಿ ಡಾಮಾರು ಕಿತ್ತುಹೋಗಿ ಗುಂಡಿಗಳಾಗ್ಗಿದ್ದು ಮಳೆಗಾಲದಲ್ಲಿ ಅಪಘಾತಕ್ಕೆ ಕಾರಣವಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಈ ರಸ್ತೆ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸವನ್ನು ನೆರವೇರಿಸಲಾಗಿತ್ತು. ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಇನ್ನು ಪ್ರಾರಂಭಿಸಿಲ್ಲ ಲೋಕೋಪಾಯೋಗಿ ಇಲಾಖೆಯ ಇಂಜಿನಿಯರ್ ರವಿಯವರು ಹೇಳುವಂತೆ 3ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಗಳು ಅಂತೀಮವಾಗಿಲ್ಲ .
ಟೆಂಡರ್ ಅಂತಿಮವಾಗದೇ ಗುತ್ತಿಗೆದಾರರು ಶಿಲಾನ್ಯಾಸ ಹೇಗೆ ನೇರವೇರಿಸಿದರು ಎಂಬುದು ಪ್ರಶ್ನೆಯಾಗಿದೆ. ಈಗಾಗಲೇ ಹದಗೆಟ್ಟಿರುವ ಈ ರಸ್ತೆ ಮಳೆಗಾಲದಲ್ಲಿ ಇನ್ನಷ್ಟು ಹದಗೆಟ್ಟು ಅಪಾಯಕಾರಿಯಾಗಿ ಪರಿಣಮಿಸಲಿದೆ. ಇದರಿಂದಾಗಿ ಇನ್ನಷ್ಟು ಅಪಘಾತಗಳು ನಡೆಯುವ ಆತಂಕ ಎದುರಾಗಿದೆ. ತಾಂತ್ರಿಕ ಕಾರಣದಿಂದಾಗಿ ಇನ್ನು ಟೆಂಡರ್ ಅಂತಿಮವಾಗಿಲ್ಲ ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಕಾಮಗಾರಿ ಪ್ರಾರಂಭವಾಗಬಹುದು. ಟೆಂಡರ್ ಅಪ್ರುವಲ್ ಅಗಬಹುದೆಂಬ ನಿರೀಕ್ಷೆಯಿಂದ ಕಾಮಗಾರಿಗೆ ಶಿಲಾನ್ಯಾಸ ನಡೆಸಲಾಯಿತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಆಗಿಲ್ಲ. ಈ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಮಳೆಗಾಲ ಕಳೆದ ತಕ್ಷಣವೇ ಕಾಮಗಾರಿ ಪ್ರಾರಂಭಿಸಲಾಗುವುದು.