ಕೈಕಂಬ; ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠದಲ್ಲಿ ಹಳೆ ಬಾವಿಯೊಂದರ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕುಸಿದು, ಒಬ್ಬ ಕಾರ್ಮಿಕ ಮೃತಪಟ್ಟು, ಇನ್ನೊಬ್ಬರು ಗಾಯಗೊಂಡು ಆಸ್ಪತ್ರೆ ದಾಖಲಾದ ದಾರುಣ ಘಟನೆ ಗುರುವಾರ ಬೆಳಿಗ್ಗೆ ನಡೆಯಿತು. ಮೃತಪಟ್ಟ ಕಾರ್ಮಿಕ ವೆಂಕಪ್ಪ ಸಿದ್ಧಕಟ್ಟೆ(40) ಎಂದು ಗುರುತಿಸಲಾಗಿದೆ. ಗಾಯಾಳು ಕೊಣಾಜೆಯ ಅಶೋಕ್ ಶೇಠ್(60) ಎಂದು ತಿಳಿದು ಬಂದಿದೆ.
ಬೆಳಿಗ್ಗೆ 10 ಗಂಟೆಗೆ ಕೆಲಸ ಆರಂಭಿಸಿ ಸ್ವಲ್ಪ ಹೊತ್ತಿನಲ್ಲೇ ಈ ದುರಂತ ಸಂಭವಿಸಿದೆ. ಸುಮಾರು 10 ಅಡಿ ನೀರಿರುವ ಬಾವಿಯ ನಾಲ್ಕೂ ಸುತ್ತ ನಿನ್ನೆ ಕಾಂಕ್ರೀಟ್ ಗೋಡೆ ನಿರ್ಮಿಸಲಾಗಿದ್ದು, ಗುರುವಾರ ಬೆಳಿಗ್ಗೆ ಸೆಂಟ್ರಿಂಗ್ ಮೇಲೆ ಕಾಂಕ್ರೀಟ್ ಹಾಸುತ್ತಿದ್ದಾಗ ಒಮ್ಮೆಲೇ ಸಿಮೆಂಟ್ ಸ್ಲ್ಯಾಬ್ ಬಾವಿಯೊಳಗಡೆ ಕುಸಿಯಿತು. ಆಗ ಬಾವಿ ಮತ್ತು ಸ್ಲ್ಯಾಬ್ ಮಧ್ಯೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಬ್ಬರು ಬಾವಿಗೆ ಆಯ ತಪ್ಪಿ ಬಿದ್ದರು. ಮೇಲ್ಗಡೆ ಇತರ ಮೂವರು ಕಾರ್ಮಿಕರಿದ್ದರು.
ಮೇಲಿದ್ದ ಕಾರ್ಮಿಕರು ಹಾಗೂ ಸ್ಥಳೀಯರು ತಕ್ಷಣ ಬಾವಿಯೊಳಗೆ ಬಿದ್ದವರ ರಕ್ಷಣಾ ಕಾರ್ಯ ನಡೆಸಿದರೂ, ಮೇಲೆತ್ತುವಾಗ ಇಬ್ಬರಲ್ಲಿ ಒಬ್ಬರು ಕೊನೆಯುಸಿರೆಳೆದಿದ್ದರು. ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವ ರವಾನಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಅವರು ಮನೆಗೆ ತೆರಳಿದ್ದಾರೆ.
“ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಾವಿಗೆ ಪೂರ್ಣ ಪ್ರಮಾಣದಲ್ಲಿ ಬಲಿಷ್ಠವಾದ ಆಧಾರ ಸ್ಲ್ಯಾಬ್ ಅಳವಡಿಸದೆ ಕಾಂಕ್ರೀಟ್ ಹಾಸಲಾದ್ದರಿಂದ ಈ ದುರಂತ ಸಂಭವಿಸಿದೆ” ಎಂದು ಬಜ್ಪೆ ಪೊಲೀಸ್ ಠಾಣಾಧಿಕಾರಿ ಪರಶಿವಮೂರ್ತಿ ಸಂಶಯ ವ್ಯಕ್ತಪಡಿಸಿದರು.
ಮೂಡಬಿದ್ರಿಯ ರಾಜೇಶ್ ಎಂಬವರು ಬಾವಿ ದುರಸ್ತಿ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದಾರೆ. ಗಂಜಿಮಠದ ಪೂಂಜ ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ಸುಮಾರು ಒಂದೂವರೆ ಎಕ್ರೆ ಜಾಗದಲ್ಲಿ ಪೆಟ್ರೋಲ್ ಪಂಪೊಂದು ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಸಮತಟ್ಟುಗೊಳಿಸಲಾದ ಜಾಗದಲ್ಲಿ ಸುಮಾರು 50 ಅಡಿ ಆಳದ ಬಾವಿಯೊಂದಿದ್ದು, ಅದನ್ನು ಹಾಗೆಯೇ ಉಳಿಸಿ ದುರಸ್ತಿ ಮಾಡಲಾಗುತ್ತಿದೆ. ಇದು ಮಂಗಳೂರಿನ ಆದಿತ್ಯ ಪೂಂಜರಿಗೆ ಸೇರಿದ ಆಸ್ತಿಯಾಗಿದೆ.
ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಇಂಜಿನುಗಳು ಹಾಗೂ ಸಿಬ್ಬಂದಿ ತಂಡ ಆಗಮಿಸಿದೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.


