ಉತ್ತರಕಾಶಿ : ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಮರುಮತಾಂತರಿಸಿದ ಮೂವರು ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ ಲಭಿಸಿದೆ. ಈ ಹಿಂದೆ ಅಪಹರಣಕಾರರಿಂದ ಬಲವಂತದಿಂದ ಮತಾಂತರಿಸಲ್ಪಟ್ಟಿದ್ದ ಸ್ಥಳೀಯ ಮಹಿಳೆಯೋರ್ವರನ್ನು ಮಂಗಳವಾರದಂದು ಉತ್ತರ ಕಾಶಿ ಜಿಲ್ಲೆಯ ಮನೇರಿ ಪೊಲೀಸ್ ಠಾಣೆಗೆ ಕರೆತಂದು ಶುದ್ಧೀಕರಣ ವಿಧಿವಿಧಾನಗಳನ್ನು ಠಾಣೆಯಲ್ಲಿಯೇ ನಡೆಸುವ ಮೂಲಕ ಈ ಮಹಿಳೆಯನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿತ್ತು. ಮಹಿಳೆಯ ಮರು ಮತಾಂತರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯ ಮರುಮತಾಂತರ ಪ್ರಕ್ರಿಯೆ ನಡೆದ ವೇಳೆ ಠಾಣೆಯಲ್ಲಿ ಹಾಜರಿದ್ದ ಈ ಮೂವರು ಪೊಲೀಸರನ್ನು ಇದೀಗ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
