ಸುದ್ದಿ9ಬಂಟ್ವಾಳ:ತಾಲ್ಲೂಕಿನ ವಗ್ಗ ಎಂಬಲ್ಲಿ ಕಟ್ಟಿ ಹಾಕಿದ್ದ ಐದು ಜಾನುವಾರುಗಳನ್ನು ಕಳವು ಮಾಡಿ ಪಿಕಪ್ ವಾಹನವೊಂದರಲ್ಲಿ ತಂಡವೊಂದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ಬಂಟ್ವಾಳ ಬೈಪಾಸ್ ಎಂಬಲ್ಲಿ ಹಿಡಿದು ನಗರ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಆರೋಪಿಗಳನ್ನು ಪಿಕಪ್ ವಾಹನ ಚಾಲಕ ಐವನ್ ಡಿಸೋಜ, ತಸ್ಲೀಂ, ಬಶೀರ್, ಅಶೋಕ ಎಂದು ಗುರುತಿಸಲಾಗಿದ್ದು, ಈ ಪೈಕಿ ಐವನ್ ಡಿಸೋಜ ಮಾತ್ರ ಸೆರೆ ಸಿಕ್ಕಿ ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಜಾನುವಾರುಗಳನ್ನು ವಗ್ಗ ಪರಿಸರದಲ್ಲಿ ಕಳವು ಮಾಡಿ ಬಳಿಕ ಮಂಗಳೂರಿನ ಕಸಾಯಿಖಾನೆಗೆ ಗುರುವಾರ ತಡರಾತ್ರಿ ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಈ ನಡುವೆ ಹಿಂದೂ ಸಂಘಟನೆ ಕಾರ್ಯಕರ್ತರು ಧರ್ಮನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ಸಲ್ಲಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
