ಶ್ರೀನಿವಾಸಪುರ: ಸಮಾಜದ ಎಲ್ಲ ವರ್ಗದ ಜನರೂ ಗ್ರಾಮೀಣ ವಿದ್ಯಾರ್ಥಿಗಳ ಸೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ಹೇಳಿದರು.ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ನೀಡುವ ಉಚಿತ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ದಾನಿಗಳ ನೆರವಿನಿಂದ ಹಸಿದ ವಿದ್ಯಾರ್ಥಿಗಳಿಗೆ ಊಟ ಕೊಡುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ಹೇಳಿದರು.

ಗಡಿ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟವಂತರು. ಅವರ ಹಿತ ಕಾಯುವ ಜನರು ಸುತ್ತಲೂ ನೆರೆದಿದ್ದಾರೆ. ಉತ್ತಮ ಬೋಧನೆ ನಡೆಯುತ್ತಿದೆ. ಫಲಿತಾಂಶ ಅತ್ಯತ್ತಮವಾಗಿದೆ. ಇದೊಂದು ಮಾದರಿ ಸರ್ಕಾರಿ ಕಾಲೇಜಾಗಿ ಹೊರಹೊಮ್ಮುತ್ತಿದೆ. ಕಾಲೇಜಿನ ಅಭಿವೃದ್ಧಿ ಹಿಂದೆ ಗ್ರಾಮದ ನಿವೃತ್ತ ಪ್ರಾಂಶುಪಾಲ ಬಷೀರ್ ಅವರ ಶ್ರಮ ಅಡಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಎ.ಲಕ್ಷ್ಮೀನಾರಾಯಣಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಿಗ್ಗೆ ಗ್ರಾಮೀಣ ಪ್ರದೇಶದಿಂದ ಕಾಲೇಜಿಗೆ ಬರುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬೆಳಗಿನ ಉಪಾಹಾರ ಸೇವಿಸುತ್ತಿರಲಿಲ್ಲ. ಅದರಿಂದ ವಿದ್ಯಾರ್ಥಿಗಳಲ್ಲಿ ಪಾಠ ಪ್ರವಚನ ಕೇಳುವ ಆಸಕ್ತಿ ಇರುತ್ತಿರಲಿಲ್ಲ. ಹಸಿವಿನಿಂದ ದೈಹಿಕವಾಗಿ ಬಳಲುತ್ತಿದ್ದರು. ಹೊಟ್ಟೆನೋವು, ತಲೆ ನೋವು ಸಾಮಾನ್ಯವಾಗಿ ಕಂಡುಬರುತ್ತಿತ್ತು. ಆದ್ದರಿಂದ ಕಾಲೇಜಿನ ಸಿಬ್ಬಂದಿ ಹಾಗೂ ಸಾರ್ವಜನಿಕರ ನೆರವು ಪಡೆದು ಮಧ್ಯಾಹ್ನದ ಹೊತ್ತು ಬಿಸಿಯೂಟ ನೀಡಲಾಗುತ್ತಿದೆ. ಈ ಹಿಂದೆ ಕಾಣಿಸಿಕೊಳ್ಳುತ್ತಿದ್ದ ದೈಹಿಕ ಸಮಸ್ಯೆಗಳು ಈಗ ಕಾಣುತ್ತಿಲ್ಲ ಎಂದು ಹೇಳಿದರು.
ಸುಂದರಪಾಳ್ಯ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ವೆಂ.ರವಿಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎನ್.ಕುಬೇರಗೌಡ, ಸಾಹಿತಿ ಚಕಪತಿಗೌಡ, ನಿವೃತ್ತ ನ್ಯಾಯಾಧೀಶ ಆರ್.ಚೌಡಪ್ಪ, ಉಪನ್ಯಾಸಕ ಡಾ. ಎಸ್.ಎ.ಶೇಷಗಿರಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ದಾನಿಗಳ ನೀಡಿದ ಸಮವಸ್ತ್ರವನ್ನು ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ನಿವೃತ್ತ ಪ್ರಾಂಶುಪಾಲ ಹಾಗೂ ದಾನಿ ಬಷೀರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀನಿವಾಸರೆಡ್ಡಿ, ಎಸ್.ಅಬ್ದುಲ್ ರಜಾಕ್, ಡಾ. ಆರ್.ರವಿಕುಮಾರ್, ಆದಿಲಕ್ಷ್ಮಮ್ಮ, ಹನುಮೇಗೌಡ, ಡಾ. ಹಸನ್ ಸಾಬ್, ಸಂತೋಷ್ ಕುಮಾರ್ ಮತ್ತಿತರರು ಇದ್ದರು.
* ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ