ಬಂಟ್ವಾಳ: ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿಯ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ಸಮಸ್ತ ದೇವಾಡಿಗ ಸಮಾಜದಿಂದ ನೂತನ ಷಷ್ಠಿರಥ ಸಮರ್ಪಣೆ ಮಾ. ೧೧ರಂದು ಜರಗಲಿದೆ ಎಂದು ಸಮಿತಿಯ ಅಧ್ಯಕ್ಷ ರಾಮದಾಸ್ ಬಂಟ್ವಾಳ ಹೇಳಿದರು.
IMG-20200116-WA0058
ಅವರು ಗುರುವಾರ ಪೊಳಲಿ ಕ್ಷೇತ್ರದಲ್ಲಿ ಷಷ್ಠಿರಥ ಸಮರ್ಪಣೆಯ ಕುರಿತು ಕಚೇರಿಯನ್ನು ಉದ್ಘಾಟಿಸಿ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪೊಳಲಿ ಕ್ಷೇತ್ರದಲ್ಲಿ ರಥಕಟ್ಟುವ ಕಾರ್ಯ ನಿರ್ವಹಿಸುವ ದೇವಾಡಿಗ ಸಮುದಾಯವು ಷಷ್ಠಿರಥದಲ್ಲಿ ಒಡಕಿರುವುದನ್ನು ಕಂಡುಕೊಂಡು, ಸಮಾಜದಿಂದ ಕ್ಷೇತ್ರಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ರಥ ಸಮರ್ಪಣೆಗೆ ನಿರ್ಧರಿಸಲಾಗಿತ್ತು. ಹೀಗಾಗಿ ಕ್ಷೇತ್ರದಲ್ಲಿ ವರ್ಷಕ್ಕೆ ೫ ಬಾರಿ ಎಳೆಯುವಂತಹ ಷಷ್ಠಿ ರಥವನ್ನು ಆಯಕ್ಕೆ ಅನುಗುಣವಾಗಿ ನಿರ್ಮಿಸುವ ಕಾರ್ಯ ನಡೆಯಲಿದೆ.
 ಮಾ. ೧೧ರಂದು ರಥ ಸಮರ್ಪಣೆಗೆ ಪೂರ್ವಭಾವಿಯಾಗಿ ಮಾ. ೮ರಂದು ಹೊರೆಕಾಣಿಕೆ ಸಮರ್ಪಣೆ, ಮಾ. ೯ರಂದು ಶಿಲ್ಪಿಗಳಿಂದ ನೂತನ ಷಷ್ಠಿರಥ ಸ್ವೀಕಾರ, ಮಾ. ೧೦ರಂದು ವಿವಿಧ ವೈದಿಕ ಕಾರ್ಯಗಳು ಜರಗಲಿದೆ. ಮಾ. ೧೧ರಂದು ಬೆಳಗ್ಗೆ ೬ರಿಂದ ರಾತ್ರಿ ೨ರ ವರೆಗೆ ಸಮರ್ಪಣೆಯ ಕಾರ್ಯಕ್ರಮ ಜರಗುತ್ತದೆ. ಬೆಳಗ್ಗೆ ೮ಕ್ಕೆ ರಥ ಸಮರ್ಪಣಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ ೧೧ರ ಶುಭ ಮುಹೂರ್ತದಲ್ಲಿ ಶ್ರೀ ದೇವಿಗೆ ನೂತನ ಷಷ್ಠಿರಥ ಸಮರ್ಪಣೆ, ರಥೋತ್ಸವ ಜರಗುತ್ತದೆ. ಸಂಜೆ ೩ಕ್ಕೆ ಕೃತಜ್ಞತಾ ಸಭೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಡಾ| ಎಂ.ವೀರಪ್ಪ ಮೊಲಿ, ಮಾಲತಿ ವೀರಪ್ಪ ಮೊಯಿಲಿ, ದ.ಕ.ಸಂಸದ ನಳಿನ್‌ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ವಿವಿಧ ಪದಾಧಿಕಾರಿಗಳಾದ ಪ್ರವೀಣ್ ಬಿ.ತುಂಬೆ, ನಾಗೇಶ್ ದೇವಾಡಿಗ ಪೊಳಲಿ, ಚಂದ್ರಾವತಿ ದೇವಾಡಿಗ, ಪ್ರಶಾಂತ್ ದೇವಾಡಿಗ, ಕೃಷ್ಣಪ್ಪ ದೇವಾಡಿಗ, ಭಾಸ್ಕರ ಎಂ.ಕದ್ರಿ, ರೋಹಿತಾಕ್ಷ ಮರೋಳಿ, ಕರುಣಾಕರ ಎಂ.ಎಚ್. ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *