ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಇನ್ನು ಮುಂದೆ ರಸ್ತೆ ಬದಿ ಎಲ್ಲಂದರಲ್ಲಿ ಕಸ ಎಸೆದರೆ ಹುಷಾರ್…ಕಾರಿನಲ್ಲಿಯೋ,ದ್ವಿಚಕ್ರ ವಾಹನದಲ್ಲಿಯೋ ಅಥವಾ ಹೀಗೆ ಪ್ಲಾಸ್ಟಿಕ್ ನಲ್ಲಿ ಗಂಟುಕಟ್ಟಿ ರಸ್ತೆಗೆ ಬಂದು ಕಸ ಎಸೆದರೆ ತಮ್ಮ ಭಾವಚಿತ್ರ  ಫೇಸ್ ಬುಕ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಮಾನಹರಾಜಾಗುವುದು ಜೋಕೆ..! ಅಂತಹವೊಂದು ಹೊಸ ತಂತ್ರಜ್ಞಾನವನ್ನು ಬಂಟ್ವಾಳ ಪುರಸಭೆ ಅನುಷ್ಠಾನಕ್ಕೆ ತರಲು ಯೋಚಿಸಿದ್ದು, ಎಲ್ಲವು ಅಂದುಕೊಂಡಂತೆ ನಡೆದರೆ ಅತೀ ಶೀಘ್ರದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಇದು ಕಾರ್ಯಾಚರಿಸಲಿದೆ.IMG_20200116_131331 (1)

ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಇಂತಹ ಹೊಸ ತಂತ್ರಜ್ಞಾನ ಅಳವಡಿಸಿ “ನಿರ್ಮಲ ಬಂಟ್ವಾಳ” ಕ್ಕೆ ವಿಶೇಷ ಮುತುವರ್ಜಿವಹಿಸಿದ್ದಾರೆ. ಈಗಾಗಲೇ ಈ ತಂತ್ರಜ್ಞಾನ ಅಳವಡಿಸಲು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಸಿದ್ದತೆಯನ್ನು ಮಾಡಿಕೊಂಡಿದ್ದು,ಗುರುವಾರ ಪುರಸಭಾ ಅವರಣದಲ್ಲಿ ಪತ್ರಕರ್ತರ ಮುಂದೆ ಇದರ ಪ್ರಾತ್ಯಕ್ಷತೆಯನ್ನು  ನಡೆಸಲಾಯಿತು.

ಬಂಟ್ವಾಳದವರೇ ತಂತ್ರಜ್ಞರು:                   

ರಸ್ತೆ ಬದಿ ಕಸ ಎಸೆಯುವವರನ್ನು ಪತ್ತೆಹಚ್ಚಲು ಸಿಸಿ ಕ್ಯಾಮರಾ ಅಳವಡಿಸುವಂತದ್ದು  ಹಳೆಯ ಪ್ಲಾನ್ , ಇದೀಗ ಬಂಟ್ವಾಳ ನಿವಾಸಿಗಳೇ ಆಗಿರುವ ಸಾಫ್ಟ್ ವೇರ್ ತಂತ್ರಜ್ಞರಿಬ್ಬರು ಕ್ಯಾಮರಾವನ್ನು ಮತ್ತಷ್ಟು ಸ್ಮಾರ್ಟ್ ಮಾಡಿಸುವ ತಂತ್ರಜ್ಞಾನ ಸಿದ್ಧಪಡಿಸಿದ್ದಾರೆ. ಈ ಕುರಿತು  ಪುರಸಭೆ ಆವರಣದಲ್ಲಿ ಸಾಫ್ಟ್ ವೇರ್ ನಿಯಂತ್ರಿತ ಕ್ಯಾಮರಾ ಕಾರ್ಯವೆಸಗುವ ಪ್ರಾತ್ಯಕ್ಷಿಕೆಯನ್ನು ಇಂಜಿನಿಯರುಗಳಾದ ಸಂದೀಪ್ ಬಂಟ್ವಾಳ ಮತ್ತು ಕೃಷ್ಣಕುಮಾರ ಸೋಮಯಾಜಿ ನೀಡಿದರು.

ಸ್ಮಾರ್ಟ್ ಕ್ಯಾಮರಾ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರೋಪಕರಣದ ಕಲಿಕಾವಿಧಾನದ ತಂತ್ರವನ್ನು ಉಪಯೋಗಿಸಿ ಇದು ಉಪಯೋಗಿಸಲ್ಪಡುತ್ತದೆ ಎಂದು ವಿವರಿಸಿದ ಸಂದೀಪ್, ಕ್ಯಾಮರಾವನ್ನು ನಿರ್ದಿಷ್ಟ ಜಾಗದಲ್ಲಿ ಅಳವಡಿಸಿದ ಬಳಿಕ ಅದಕ್ಕೆ ಹಾಕಲಾದ ಸಾಫ್ಟ್ ವೇರ್ ಕೆಲಸ ಮಾಡಲು ಆರಂಭಿಸುತ್ತದೆ ಎಂದರು.  ನಿರ್ದಿಷ್ಟ ಜಾಗದಲ್ಲಿ ಕಸ ಎಸೆಯುವವರ ಚಿತ್ರವನ್ನು ಸೆರೆಹಿಡಿದು ಫೇಸ್ ಬುಕ್ ಪೇಜ್ ಗೆ ಅದೇ ಅಪ್ಲೋಡ್ ಮಾಡುತ್ತದೆ. ಕಸ ಎಸೆದ ವ್ಯಕ್ತಿಯ ಭಾವಚಿತ್ರ ಫೇಸ್ ಬುಕ್ ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗುತ್ತದೆ. ಇದನ್ನು ಆಯಕಟ್ಟಿನ ಜಾಗದಲ್ಲಿ ಅಳವಡಿಸಿದರೆ, ಸಾಫ್ಟ್ ವೇರ್ ತಂತ್ರಾಂಶವನ್ನು ಸಿದ್ಧಪಡಿಸಿ ಕಸ ಎಸೆಯುವ ಕೃತ್ಯವನ್ನು ಜಗತ್ತಿಗೇ ತಿಳಿಯಪಡಿಸುವ ಕಾರ್ಯ ಮಾಡಿಸಿದಂತಾಗುತ್ತದೆ. ಈ ಪ್ರಯೋಗ ದೇಶದಲ್ಲೇ ಮೊದಲು ಎಂದು ಸಂದೀಪ್ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ ಸುಮಾರು 14 ವರ್ಷ ಕೆಲಸ ನಿರ್ವಹಿಸಿದ ಬಂಟ್ವಾಳ ಚಂಡ್ತಿಮಾರ್ ನಿವಾಸಿ ಸಂದೀಪ್ ಬಂಟ್ವಾಳ ಅಡ್ಯಾರ್ ನಲ್ಲಿ ವಾಗನ್ ಟ್ಯುನೆನ್ ಎಂಬ ಕಾರಿಗೆ ಸಂಬಂಧಿತ ಉದ್ಯಮ ನಡೆಸುತ್ತಿದ್ದರೆ, ಗಾಣದಪಡ್ಪು ನಿವಾಸಿ ಕೃಷ್ಣಕುಮಾರ ಸೋಮಯಾಜಿ ಅವರು ಇನ್ಫೋಸಿಸ್ ನಲ್ಲಿ 16 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಇದೀಗ ಸ್ವತಂತ್ರವಾಗಿ ಸಾಫ್ಟ್ ವೇರ್ ಉದ್ಯಮ ನಡೆಸುತ್ತಿದ್ದಾರೆ.ಇವರಿಬ್ಬರು ಕ್ಲಾಸ್ ಮೇಟ್ ಗಳು ಕೂಡಾ ಆಗಿದ್ದಾರೆ.ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಕಿರಿಯ ಇಂಜಿನಿಯರ್ ಸಹಾಯಕ ಇಕ್ಬಾಲ್, ಪುರಸಭೆ ನಿವೃತ್ತ ಅಧಿಕಾರಿ ಶಿವಶಂಕರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *