ಕೈಕಂಬ: ಕೊರೋನಾ ಸೋಕು ತಡೆಗಾಗಿ ಗುರುಪುರ ಗ್ರಾಮ ಪಂಚಾಯತ್‍ನಲ್ಲಿ ರಚಿಸಲಾದ ಗ್ರಾಮ ಕಾರ್ಯ ಪಡೆಯ ವಾರದ ಸಭೆಯು ಪಂಚಾಯತ್ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಎ. 16ರಂದು ಪಂಚಾಯತ್ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ಮಠದಗುಡ್ಡೆ ಸೈಟಿನ ಮುರುಕಲು ಮನೆಯಲ್ಲಿ ನಿರ್ವಸತಿಗ ಕುಟುಂಬದ ಮೂವರಿಗೆ ಉಳಿದುಕೊಳ್ಳಲು ಪತ್ರಕರ್ತನೊಬ್ಬ ವ್ಯವಸ್ಥೆ ಮಾಡಿರುವ ಘಟನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ವರದಿ ಪಡೆದು, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೂಲಕ ನಿರ್ವಸತಿಗರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸುವ ಹಾಗೂ ಅದಕ್ಕಿಂತ ಮುಂಚೆ ಆರೋಗ್ಯ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ನಡೆಸಲು ಪಿಡಿಒ ಸಹಿತ ಕಾರ್ಯಪಡೆಯ ಸದಸ್ಯರು ನಿರ್ಣಯಿಸಿದರು.
ಗ್ರಾಮದ ಕಾಂಜಿಲಕೋಡಿ ಮತ್ತು ಪೊನ್ನೆಲದಲ್ಲಿ ಇತ್ತೀಚೆಗೆ ಗುರುತಿಸಲಾದ ಐದು ನಿರ್ವಸತಿಗ ಕುಟುಂಬಗಳಿಗೆ ಇಲಾಖೆ ವತಿಯಿಂದ ಆಹಾರ ಕಿಟ್ ಒದಗಿಸಲು ಆಶಾ ಕಾರ್ಯಕರ್ತೆ ಜಯಲಕ್ಷ್ಮೀ ಮನವಿ ಮಾಡಿದರು.
ಸಭೆಯಲ್ಲಿ ವೈದ್ಯಾಧಿಕಾರಿ ಡಾ. ಅಮಿತ್ ರಾಜ್, ತಾಪಂ ಸದಸ್ಯ ಸಚಿನ್ ಅಡಪ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.