ಕೈಕಂಬ : ಆಚಾರ-ವಿಚಾರ ಸರಿಯಾಗಿದ್ದರೆ, ದೇವರು-ದೈವಗಳು ನಮ್ಮನ್ನು ಸರಿಯಾದ ದಿಕ್ಕಿನತ್ತ ನಡೆಸುತ್ತವೆ. ಹಾಗೆಯೇ ದೇವರ ಕೃಪೆಗೆ ಪಾತ್ರರಾಗುತ್ತೇವೆ. ಮರಣ ಹೊಂದಿದಾಗ ನಾವು ಇಹದಲ್ಲಿ ಮಾಡಿರುವ ಉತ್ತಮ ಮತ್ತು ಕೆಟ್ಟ ಕರ್ಮಗಳನ್ನು ಮಾತ್ರ ಜೊತೆಯಲ್ಲಿ ಕೊಂಡೊಯ್ಯುತ್ತೇವೆ. ನೂತನವಾಗಿ ನಿರ್ಮಿಸಲಾದ ಈ `ಆನೆ ಬಾಕಿಲ್’ ಭಂಡಾರ ಮನೆಗೆ ಆಗಮಿಸುವ ಭಕ್ತರಲ್ಲಿ ದೇವರ ಮೇಲಿನ ಶ್ರದ್ಧೆ ಹೆಚ್ಚಿಸುವ ಪುಣ್ಯದ್ವಾರವಾಗಲಿ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀ ಹೇಳಿದರು.
ಗುರುಪುರ ಕುಕ್ಕುದಕಟ್ಟೆಯಲ್ಲಿ ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದ ಮನೆಗೆ(ಬದಿನ ಮನೆ) ನಿರ್ಮಿಸಲಾದ ನೂತನ ಆನೆ ಬಾಕಿಲ್(ಮುಖ ಮಂಟಪ) ಉದ್ಘಾಟಿಸಿ, ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಗುರುಪುರ ಶ್ರೀ ಜಂಗಮ ಮಠದ ಶ್ರೀ ರುದ್ರಮುನಿ ಸ್ವಾಮಿಯವರು ಈ ದೈವಸ್ಥಾನ ಉತ್ತರೋತ್ತರ ಬೆಳಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಕಾರಮೊಗರು ಮತ್ತು ಶ್ರೀ ವೈದ್ಯನಾಥ ದೈವಸ್ಥಾನದ ಗಡಿಕಾರ ಪ್ರಮೋದ್ ಕುಮಾರ್ ರೈ ಸಂದರ್ಭೋಚಿತ ಮಾತನಾಡಿದರು.
ಶ್ರೀ ವೈದ್ಯನಾಥ ಪಾತ್ರ ವಕೀಲ ಚಂದ್ರಹಾಸ ಕೌಡೂರು ಮುಖ ಮಂಟಪ ನಿರ್ಮಾಣದ ಬಗ್ಗೆ ಪ್ರಸ್ತಾವಿಕ ಮಾತನಾಡಿದರು.ನೂತನ ಮುಖ ಮಂಟಪದ ಸೇವಾರ್ಥಿ, ಶ್ರೀ ಧೂಮಾವತಿ ದೈವದ ಚಾಕರಿ ಕೆಲಸದ, ವೃತ್ತಿಯಲ್ಲಿ ಪೈಂಟರ್ ಗುತ್ತಿಗೆದಾರರಾಗಿರುವ ಗಿರೀಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಿವಿಲ್ ಕಾಂಟ್ರಾಕ್ಟರ್ ಶೇಖರ್ ಕೋಟ್ಯಾನ್‌ಗೆ ಗೌರವ ಸಂದಾಯ ಮಾಡಲಾಯಿತು.
ಧೂಮಾವತಿ ದೈವದ ಪಾತ್ರಿ ತನಿಯಪ್ಪ ಪೂಜಾರಿ, ರವೀಂದ್ರ ಶೆಟ್ಟಿ ಬೊಳ್ಳೂರುಗುತ್ತು, ಶ್ರೀಧರ ಪೂಜಾರಿ ಭಂಡಾರಮನೆ, ಗುರುಪುರ ಗ್ರಾಮ ಪಂಚಾಯತಿನ ನೂತನ ಸದಸ್ಯರಾದ ಉದಯ ಭಟ್, ಸಚಿನ್ ಅಡಪ, ಸುನಿಲ್ ಕುಮಾರ್ ಹಗೂ ದೈವಸ್ಥಾನದ ತಂತ್ರ ವಾಸುದೇವ ಭಟ್, ಉದ್ಯಮಿ ಗೋಪಾಲಕೃಷ್ಣ ಕೈಕಂಬ, ದೈವದ ಚಾಕರಿಯವರಾದ ಡೊಂಬಯ್ಯ ಪೂಜಾರಿ, ಸೀತಾರಾಮ ಪೂಜಾರಿ, ಆನಂದ ಪೂಜಾರಿ ಮತ್ತು ಇತರರು ಉಪಸ್ಥಿತರಿದ್ದರು. ಉದ್ಯಮಿ ಯಶವಂತ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಕುಮಾರ್ ಬರ್ಕೆ ವಂದಿಸಿದರು. ಈ ಸಂದರ್ಭದಲ್ಲಿ ಭಂಡಾರದ ಮನೆಯಲ್ಲಿ ವಿಶೇಷ ಪೂಜೆ ನಡೆಯಿತು.