ಕೈಕಂಬ: ಗುರುಪುರ ಗೋಳಿದಡಿಗುತ್ತುವಿನ ಚಾವಡಿಯಲ್ಲಿ ಎ. ೨ರಂದು, ಯುಗಾದಿಯ ಶುಭ ಅವಸರದಲ್ಲಿ ಗೋಳಿದಡಿಗುತ್ತುವಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮುಂದಾಳತ್ವದಲ್ಲಿ ಮಂಗಳೂರು ಕೆನರಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ರಾಘವೇಂದ್ರ ಪ್ರಭು ಎಂ ಬರೆದಿರುವ ವೇದೋಪನಿಷತ್ತುಗಳು ಮತ್ತು ಭಾರತೀಯ ದರ್ಶನಗಳ ಸರಳ ನಿರೂಪಣೆಯ `ಕೈವಲ್ಯ’ ಕೃತಿ ಬಿಡುಗಡೆಗೊಳಿಸಲಾಯಿತು.
ಪುಸ್ತಕ ಬಿಡುಗಡೆಗೊಳಿಸಿದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ಜನಜೀವನ ವ್ಯತಿರಿಕ್ತವಾಗಿ ಬದಲಾಗುತ್ತಿದೆ. ನಮ್ಮ ಜೀವನ ಮತ್ತು ಜೀವನದ ಆಗುಹೋಗುಗಳು, ಆಚಾರವಿಚಾರ, ನಡೆನುಡಿಗಳು ಹೇಗಿದ್ದರೆ ಒಳಿತು ಮತ್ತು ಪರಿಣಾಮಗಳ ಕುರಿತು ವೇದದಲ್ಲಿ ಸ್ಪಷ್ಟ ವಿಚಾರ, ಉಲ್ಲೇಖಗಳಿವೆ. ನಾವೀಗ ಸಹಜ ಮಾನವ ಧರ್ಮ ಮರೆತು, ಆಡಂಬರದ ಬದುಕಿಗೆ ಒತ್ತು ನೀಡುತ್ತಿದ್ದೇವೆ. ವೇದಾಂತದ ಪಡಿಯಚ್ಚಿನಲ್ಲಿ ನಮ್ಮ ದೇಶದ ಸಂಸ್ಕೃತಿ ಇತ್ತು. ಕಾರಣಾಂತರಗಳಿಂದ ಅಸಹಜ ದೃಶ್ಯಗಳು ರೂಢಿಗತವಾಗುತ್ತಿವೆ ಎಂದರು.
ಶ್ರೀ ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಗುರುಪುರ ಪ್ರಕಾಶಿತ ಈ ಕೃತಿಗೆ ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಬ್ರಹ್ಮಋಷಿ ಕೆ ಎಸ್ ನಿತ್ಯಾನಂದ ಗುರುಗಳು ಶುಭ ಹಾರೈಸಿದ್ದಾರೆ.
ಸುನೀಲಾ ಪಿ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೇದಾಂತ ಚಿಂತನ-ಮಂಥನ ಸಂದರ್ಭದಲ್ಲಿ ಸಭಿಕರ ಪ್ರಶ್ನೆಗಳಿಗೆ ಗಡಿಕಾರರು ಉತ್ತರಿಸಿದರು. ಗುರುಪ್ರಸಾದ ಮಾಡ ಬೊಳ್ಳುಳ್ಳಿಮಾರುಗುತ್ತು ಪೆರ್ಮುದೆ, ಸುಧಾಕರ ಶೆಟ್ಟಿ ಮುಂಡ್ಕೂರು, ಅರುಣ್ ಶೆಟ್ಟಿ ಗುಂಡಬೆಟ್ಟುಗುತ್ತು, ಹೋಟೆಲ್ ಉದ್ಯಮಿ ರವಿ ಭಟ್, ಸತೀಶ್ ಕಾವ ಬೆಳ್ಳಿಬೆಟ್ಟುಗುತ್ತು, ನವೀನ್ ಶೆಟ್ಟಿ ಪೆರ್ಮಾರಗುತ್ತು, ಉಷಾ ವರ್ಧಮಾನ ಶೆಟ್ಟಿ, ಶ್ರುತಿ ಹೆಗ್ಡೆ ಮಜಲಬೆಟ್ಟು ಬೀಡು, ಸುಜಾತಾ ಎಸ್ ಶೆಟ್ಟಿ ಮುಂಡೇರು, ಡಾ. ದಿವ್ಯಾ ಡಿ, ದೀಪಾ ಎನ್ ಶೆಟ್ಟಿ ಪೆರ್ಮಾರಗುತ್ತು, ಮೋಹನ್ ಶೆಟ್ಟಿ, ಭಾಗ್ಯರಾಜ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
