ಕೈಕಂಬ : ಐದಾರು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ(೧೬೯) ಕುಲಶೇಖರದಿಂದ ಗುರುಪುರ ಕೈಕಂಬದವರೆಗೆ ಡಾಮರೀಕರಣ ಕಾಮಗಾರಿ ನಡೆದಾಗ ಸುಪ್ರೀಂ ಕೋರ್ಟಿನ ಆದೇಶದನ್ವಯ ದೊಡ್ಡ ಹಂಪ್ಸ್ ತೆರವುಗೊಳಿಸಿ, ಒಂದೊಂದು ಕಡೆಗಳಲ್ಲಿ ಐದಾರು ಸಣ್ಣ ಹಂಪ್‌ಗಳ ʼರಂಬಲ್ಸ್’ ಅಳವಡಿಸಲಾಗಿದೆ. ಇದಾದ ಬಳಿಕ ರಂಬಲ್ಸ್ ಇರುವಲ್ಲಿ ಹಾಗೂ ಇತರ ೨೦ಕ್ಕೂ ಹೆಚ್ಚಿನ ಕಡೆಗಳಲ್ಲಿ ʼರಂಬಲ್ ಸ್ಟ್ರೀಪ್ಸ್’ ಅಳವಡಿಸಲಾಗಿದೆ. ಇದು ಎನ್‌ಎಚ್ ಮಂಗಳೂರು ಉಪ-ವಿಭಾಗದ ʼಅವೈಜ್ಞಾನಿಕ’ ಕಾಮಗಾರಿ ಎಂಬುದಾಗಿ ಸಾರ್ವಜನಿಕ ವಲಯದಿಂದ ದೂರುಗಳು ಬಂದಿವೆ.
ರಂಬಲ್ ಸ್ಟ್ರೀಪ್ ಇರುವಲ್ಲಿ ವಾಹನಿಗರು ವೇಗಮಿತಿ ಕಡಿಮೆ ಮಾಡುವುದಿಲ್ಲ. ವಾಹನಗಳು ಅತಿಯಾದ ವೇಗದಲ್ಲಿ ಈ ಸ್ಟ್ರೀಪ್ ನ ಮೇಲೆ ಹಾದು ಹೋಗುವಾಗ ಕಿವಿಗಡಚುವಂತೆ ಕರ್ಕಶ ಶಬ್ದ ಉಂಟಾಗುತ್ತದೆ. ನಿತ್ಯದ ಈ ಕಿರಿಕಿರಿ ಸಾಕಾಗಿ ಹೋಗಿದೆ ಎಂದು ಹೆದ್ದಾರಿ ಪಕ್ಕದ ಮನೆಯವರು ಮತ್ತು ಅಂಗಡಿಯವರು ದೂಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವೊಂದರನ್ವಯ ಹೆದ್ದಾರಿಗೆ ರಂಬಲ್ ಸ್ಟ್ರೀಪ್ ಮಾತ್ರ ಅಳವಡಿಸಬೇಕೆಂಬುದು ಹೆದ್ದಾರಿ ಉಪ-ವಿಭಾಗದ ಅಧಿಕಾರಿಗಳ ಸ್ಪಷ್ಟನೆ. ರಂಬಲ್ ಸ್ಟ್ರೀಪ್(ವೈಟ್ ಸಿಮೆಂಟ್‌ನ ಅರ್ಧ ಇಂಚು ದಪ್ಪದ ಐದಾರು ಗೆರೆಗಳು) ಅಳವಡಿಸಬೇಕೆಂದಿದ್ದರೆ, ಎಲ್ಲ ಕಡೆ ಅದೇ ಇರಬೇಕಿತ್ತು. ಆದರೆ ಸ್ಟ್ರೀಪ್ಸ್ ಇರುವಲ್ಲಿ ರಂಬಲ್ಸ್(ಒಂದೇ ಕಡೆ ಐದಾರು ಸಣ್ಣ ಹಂಪ್ಸ್) ಅಗತ್ಯವಿದೆಯೇ ? ಅದು ಕೋರ್ಟ್ ಆದೇಶದ ಉಲ್ಲಂಘನೆಯಲ್ಲವೇ ? ಏನೇ ಇದ್ದರೂ, ರಂಬಲ್ಸ್ ಇರುವಲ್ಲಿ ಮಾತ್ರ ವಾಹನಿಗರು ವೇಗಮಿತಿ ಕಡಿಮೆ ಮಾಡುತ್ತಾರೆಯೇ ವಿನಾ ರಂಬಲ್ ಸ್ಟ್ರೀಪ್ಸ್ ಗಣ್ಯವೇ ಅಲ್ಲ. ಹಾಗಾಗಿ, ಇದು ಹೆದ್ದಾರಿ ಉಪ ವಿಭಾಗದ ತೀರಾ ಅವೈಜ್ಞಾನಿಕ ಕ್ರಮ ಎಂದು ಹಲವರ ಟೀಕೆಯಾಗಿದೆ.
ಗುರುಪುರ ಹೊಸ ಸೇತುವೆ ಬಳಿ, ಇಳಿಜಾರಾದ ಪ್ರದೇಶದಲ್ಲಿ ರಂಬಲ್ಸ್ ಅಳವಡಿಸಬೇಕಿದ್ದರೂ, ಇಲಾಖೆಯ ಗೈಡ್‌ಲೈನ್ಸ್ನಂತೆ ಚಾಚೂತಪ್ಪದೆ ಮರ‍್ನಾಲ್ಕು ಕಡೆ ರಂಬಲ್ ಸ್ಟ್ರೀಪ್ಸ್ ಅಳವಡಿಸಲಾಗಿದೆ. ಇದರಿಂದ ಇದುವರೆಗಿನ ಮೂರು ಸಾವು ಮತ್ತು ೫೦ರ ಆಸುಪಾಸಿನಲ್ಲಿ ಸಂಭವಿಸಿರುವ ಸಣ್ಣಪುಟ್ಟ ಅಪಘಾತ ತಪ್ಪಿಸಲು ಸಾಧ್ಯವಾಗಿಲ್ಲ ಎಂಬುದು ವಿಚಿತ್ರವಾದರೂ ಸತ್ಯ. ರಂಬಲ್ಸ್ ಬದಲಿಗೆ ಒಂದಷ್ಟು ಎತ್ತರದ ರಂಬಲ್ ಸ್ಟ್ರೀಪ್ಸ್ ಅಳವಡಿಸಿದರೆ ವಾಹನಿಗರು ವೇಗಮಿತಿ ಕಡಿಮೆ ಮಾಡುತ್ತಾರೆ ಎಂದು ಸಲಹೆ ನೀಡಿದ್ದಾರೆ.
ಅನಗತ್ಯವಾಗಿ ಅಳವಡಿಸಲಾಗಿರುವ ಕೆಲವು ರಂಬಲ್ಸ್ ತೆಗೆದು, ತೀರಾ ಅಗತ್ಯವಿರುವ ಕೆಲವು ಕಡೆ ಅಳವಡಿಸಬಹುದು. ಇದರಿಂದ ಅಪಘಾತ ತಡೆಯಲು ಸಾಧ್ಯವಿದೆ. ರಂಬಲ್ಸ್ ಇರುವಲ್ಲಿ ಅಥವಾ ಇತರೆಡೆ ರಂಬಲ್ ಸ್ಟ್ರೀಪ್ಸ್ ಅಳವಡಿಸುವುದು ತೀರಾ ಅವೈಜ್ಞಾನಿಕ ಎಂಬುದು ಹೆದ್ದಾರಿ ಇಂಜಿನಿಯರ್‌ಗಳಿಗೆ ತಿಳಿಯದೆ ಹೋಗಿರುವುದು ದುರಂತವೇ ಸರಿ ಎಂದು ಗುರುಪುರದ ಅಂಗಡಿ ಮಾಲಕರೊಬ್ಬರು ಪ್ರಶ್ನಿಸಿದ್ದಾರೆ.
`ಇಲಾಖೆಗೆ ಬಂದಿರುವ ಗೈಡ್‌ಲೈನ್ಸ್ ಪ್ರಕಾರ ಹೆದ್ದಾರಿಯಲ್ಲಿ ಹಂಪ್ಸ್ ಅಳವಡಿಸುವಂತಿಲ್ಲ. ಬದಲಾಗಿ, ರಂಬಲ್ ಸ್ಟ್ರೀಪ್ಸ್ ಅಳವಡಿಸುತ್ತಿದ್ದೇವೆ. ಹೆದ್ದಾರಿಯ ಕೆಲವು ಕಡೆ ರಂಬಲ್ಸ್ ಅಳವಡಿಸಿದ್ದೇವೆ. ಇನ್ನು ಮುಂದೆ ಈ ರಂಬಲ್ಸ್ ತೆಗೆದು ರಂಬಲ್ ಸ್ಟ್ರೀಪ್ಸ್ ಗಳನ್ನೇ ಅಳವಡಿಸಬೇಕಾಗುತ್ತದೆ. ಜೊತೆಗೆ ಇದರ ದುಷ್ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುತ್ತೇವೆ” ಎಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು ಉಪ-ವಿಭಾಗದ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಕೃಷ್ಣಕುಮಾರ್ ಕೇವಲ ತಿಳಿಸಿದರು.