ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಅ. ೧೫ರಂದು ಶನಿವಾರ ಪಂಚಾಯತ್ ವ್ಯಾಪ್ತಿಯ ಅಡ್ಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ) ಕಾರ್ಡ್(ಅಭಾ ಕಾರ್ಡ್) ನೋಂದಣಿ ಕಾರ್ಯಕ್ರಮ ನಡೆಯಿತು.

ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಯೋಜನೆಗಳು ಕೈಗೆಟಕುವಂತಾಗಲು ಪಂಚಾಯತ್ ವತಿಯಿಂದ ಜನಸೇವಾ ಶಿಬಿರ ಆಯೋಜಿಸಲಾಗುತ್ತಿದೆ. ಉಚಿತ ಆರೋಗ್ಯ ಸೇವೆ ಹಾಗೂ ಇಂತಹ ಶಿಬಿರಗಳಿಂದ ಗ್ರಾಮಸ್ಥರು ಹೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್, ಸದಸ್ಯರಾದ ಬಬಿತಾ ಮತ್ತು ಆಸ್ಮಿನಾ, ಪಂಚಾಯತ್ ಸಿಬ್ಬಂದಿ, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್‌ರಾಜ್, ಆಶಾ ಸುಗಮಕಾರೆ ಜಯಲಕ್ಷ್ಮೀ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪಾಲ್ಗೊಂಡ ಹಲವರು ಆರೋಗ್ಯ ತಪಾಸಣೆ ಹಾಗೂ ಅಭಾ ಕಾರ್ಡ್ ನೋಂದಣಿ ಮಾಡಿಕೊಂಡರು. ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದ ಮಂಗಳೂರು ತಾಲೂಕು ಸಂಚಾಲಕಿ ವಾಣಿಶ್ರೀ ಅವರು ಗ್ರಾಮಸ್ಥರಿಗೆ ಆರೋಗ್ಯ ವಿಚಾರದಲ್ಲಿ ವಿಶೇಷ ಮಾಹಿತಿ ನೀಡಿದರು.
