ಕೈಕಂಬ: ಮಂಗಳೂರು ತಾಲೂಕಿನ ಎಡಪದವು ಸಮೀಪದ ಕೊರ್ಡೇಲ್ ಎಂಬಲ್ಲಿ ಅ.20ರಂದು ಗುರುವಾರ ಬಾವಿಗೆ ಬಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆಯ ಮೂಲಕ  ಮೇಲೆತ್ತಿ ರಕ್ಷಿಸಿದ್ದಾರೆ.

ಕೊರ್ಡೇಲ್ ನ ಕೃಷಿಕ ಜಯಚಂದ್ರ ರಾವ್ ಅವರು ಗುರುವಾರ ಬೆಳಿಗ್ಗೆ ತಮ್ಮ ಮನೆಯ ಪಕ್ಕದ ಬಾವಿಯಲ್ಲಿ ಚಿರತೆಯನ್ನು ಕಂಡಿದ್ದು, ತಕ್ಷಣ ಗ್ರಾಮ ಪಂಚಾಯತ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದರು.

ಮಾಹಿತಿ ಪಡೆದ ಅರಣ್ಯ ಇಲಾಖೆಯ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಪೈ ಮತ್ತು ಜಗರಾಜ್. ಬಿ. ಮತ್ತು ತಂಡ ವಾಮಂಜೂರಿನ ಪಿಲಿಕುಲದ ಡಾ. ವಿಷ್ಣು ಅವರ ನೇತೃತ್ವದ ವೈದ್ಯಕೀಯ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು.

ಅಂದಾಜು 25 ಅಡಿ ಆಳದ ನೀರು ತುಂಬಿದ್ದ ಬಾವಿಗೆ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದ ಚಿರತೆಯನ್ನು, ಬೆಳಿಗ್ಗೆ 7 ಗಂಟೆಯಿಂದ  ಕಾರ್ಯಾಚರಣೆ ನಡೆಸಿ ಮಧ್ಯಾಹ್ನ 12 ಗಂಟೆಯ ವೇಳೆಗೆ ಮೇಲೆತ್ತಿ ಯಶಸ್ವಿಯಾಗಿ ಬೋನಿನೊಳಗೆ ಸೇರಿಸಲಾಯಿತು.  

ಕಳೆದ ಕೆಲವು ದಿನಗಳಿಂದ ಕೊರ್ಡೇಲ್ ಪರಿಸರದ ಹಲವು ನಾಯಿಗಳು ನಾಪತ್ತೆಯಾಗಿದ್ದು, ಚಿರತೆ ಹೊತ್ತೊಯಿದಿರಬಹುದೆoಬ  ಅನುಮಾನದಿಂದ ಬುಧವಾರ ರಾತ್ರಿ ಸ್ಥಳೀಯರು ಚಿರತೆ ಮನೆಯ ಬಳಿ ಬರದಂತೆ ಪಟಾಕಿ ಸಿಡಿಸಿದ್ದರು ಎನ್ನಲಾಗಿದ್ದು, ಪಟಾಕಿ ಶಬ್ದ ಕೇಳಿ ಓಡಿದ ಚಿರತೆ ರಾತ್ರಿಯೆ  ಬಾವಿಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.  

ಚಿರತೆಯನ್ನು ಪಿಲಿಕುಲಕ್ಕೆ ಸಾಗಿಸಲಾಗಿದ್ದು, ಅಂದಾಜು ಮೂರು ವರ್ಷದ ಗಂಡು ಚಿರತೆ ಇದಾಗಿದ್ದು ಬಾವಿಗೆ ಬೀಳುವ ವೇಳೆ ಕಾಲಿಗೆ ಸಣ್ಣಮಟ್ಟಿನ ಗಾಯವಾಗಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ, ಸಂಪೂರ್ಣ ಚೇತರಿಕೆಯಾದ ನಂತರ ಚಿರತೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದು ಪಿಲಿಕುಲ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿಯವರು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಗಳಾದ ಖ್ಯಾತಲಿಂಗ, ದಿವಾಕರ, ಶಶಾಂಕ್ ರೈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಪಂಚಾಯತ್ ಮಾಜಿ ಸದಸ್ಯ ಪುರಂದರ ನಾಯ್ಕ್, ಗಣೇಶ್ ನಾಯಕ್, ಆಲಿ ಬ್ಯಾರಿ ಮತ್ತು ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದ್ದರು.

By suddi9

Leave a Reply

Your email address will not be published. Required fields are marked *