ಮಂಗಳೂರು: ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ದಂಧೆ ವ್ಯಾಪಕವಾಗಿದ್ದು, ಉಳಾಯಿಬೆಟ್ಟು ಗಲಭೆ ಪ್ರಕರಣದೊಂದಿಗೆ ಸಂಬಂಧ ಹೊಂದಿದೆ. ಜಿಲ್ಲೆಯ ಕಾಂಗ್ರೇಸ್ ನಾಯಕರು ಈ ದಂಧೆಕೋರರಿಗೆ ಆಶ್ರಯದಾತರಾಗಿದ್ದಾರೆಂದು ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಹೇಳಿದರು.
ಅವರು ಡಿ.14ರಂದು ಜಿಲ್ಲಾ ಕಚೇರಿಯಲ್ಲಿ ಜರುಗಿದ ವಿಶೇಷ ಸಭೆಯಲ್ಲಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ಹಂಗಾಮಿ ಸಮಿತಿಗೆ ಅಧ್ಯಕ್ಷರಾಗಿ ಪದಗ್ರಹಣ ಮಾಡಿ ಮಾತನಾಡಿದರು.
ಸಾಂಸ್ಕೃತಿಕ ಆಚರಣೆ, ನಂಬಿಕೆಗಳಿಗೆ ಅಗೌರವ ತೋರಿ ಬಹುಸಂಖ್ಯಾತರ ಭಾವನೆಗಳನ್ನು ಘಾಸಿಗೊಳಿಸಿ, ಕಾರ್ಯಾಚರಿಸುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ರಾಜ್ಯ ಗೃಹ ಸಚಿವರ ವೈಫಲ್ಯತೆಯನ್ನು ಮರೆಮಾಚಲು ಯತ್ನಿಸಲಾಗುತ್ತಿದೆ ಎಂದವರು ವಿವರಿಸಿದರು.

ಮಂಗಳೂರು ವಿಭಾಗ ಸಂಘಟನಾ ಪ್ರ.ಕಾರ್ಯದರ್ಶಿ ಪ್ರಸಾದ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮಂಡಲ ಸಮಿತಿಯ ಅಧ್ಯಕ್ಷರಾಗಿ ಜೆ.ಕೃಷ್ಣ ಪಾಲೆಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಅಶೋಕ್ ಕೃಷ್ಣಾಪುರ, ಮುರಳೀಧರ ಶೆಟ್ಟಿ ಇವರನ್ನು ಹಂಗಾಮಿಯಾಗಿ ನೇಮಿಸಿದ ಬಿಜೆಪಿ ದ.ಕ.ಜಿಲ್ಲಾ ಸಮಿತಿಯ ನಿರ್ಧಾರವನ್ನು ಪ್ರಕಟಿಸಿದರು.
ಬಿಜೆಪಿ ಸದಸ್ಯತಾ ಅಭಿಯಾನದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಜಿಲ್ಲಾ ಸಹ ಪ್ರಮುಖ್ ಕ್ಯಾ.ಬ್ರಿಜೇಶ್ ಚೌಟ ವಿವರಿಸಿದರು.
ವಿವಿಧ ಶಕ್ತಿಕೇಂದ್ರಗಳ ಪ್ರಮುಖರ ಗುಂಪು ಬೈಠಕ್ನಲ್ಲಿ ಅಭಿಯಾನದ ಯೋಜನೆ ರೂಪಿಸಲಾಯಿತು. ಪದಾಧಿಕಾರಿಗಳ ನಿಯೋಗ ವಾರ್ಡ್ ಮಟ್ಟಕ್ಕೆ ಸಂಘಟನಾ ಪ್ರವಾಸ ಕೈಗೊಳ್ಳುವುದೆಂದು ನಿರ್ಧರಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಎ.ಉಮಾನಾಥ ಕೋಟ್ಯಾನ್, ಪ್ರ.ಕಾರ್ಯದರ್ಶಿಗಳಾದ ಸಂಜೀವ ಮಠಂದೂರು, ಕಿಶೋರ್ ರೈ, ಕಾರ್ಯದರ್ಶಿ ಬಾಬು ಬಂಗೇರಾ, ಮಾಜಿ ಶಾಸಕ ಕೆ.ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.
