ಸುದ್ದಿ9 ಮೂಡುಬಿದಿರೆ: ತೆಂಕು ತಿಟ್ಟಿನ ಯಕ್ಷಗಾನ ಪ್ರಸಂಗಗಳ ನಡೆದಾಡುವ ವಿಶ್ವಕೋಶ ,ವರ್ತಮಾನದ ತೆಂಕುತಿಟ್ಟಿನ ಯಕ್ಷಗಾನದ ಸರ್ವಶ್ರೇಷ್ಠ ಭಾಗವತ ಎನ್ನುವ ಹಿರಿಮೆಯ 75ರ ಹರೆಯದ ಬಲಿಪ ನಾರಾಯಣ ಭಾಗವತರಿಗೆ ಅಭಿಮಾನಿಗಳಿಂದ ಗೌರವದ ದ್ಯೋತಕವಾಗಿ ಅವರ ಮನೆಯಂಗಳದಲ್ಲೇ ನಿರ್ಮಿಸಲಾದ ‘ಬಲಿಪ ಅಮೃತ ಭವನ’ ದ ಸಮರ್ಪಣಾ ಸಮಾರಂಭ ಇದೇ ಫೆ1ರಂದು ನಡೆಯಲಿದೆ ಎಂದು ಸಮಿತಿ ಸಂಚಾಲಕ ಡಾ. ಪ್ರಭಾಕರ ಜೋಶಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆಯ ಹೆಮ್ಮೆಯಾಗಿರುವ ವಿಶ್ವ ಖ್ಯಾತಿಯ ದೇಶದ ಶ್ರೇಷ್ಠ ಭಾಗವತರಾಗಿರುವ ಬಲಿಪರಂತಹ ಶ್ರೇಷ್ಠ ಕಲಾವಿದರಿಗೆ ಇದೊಂದು ಶ್ರೇಷ್ಠ ಗೌರವ ಎಂದ ಡಾ.ಜೋಶಿ ಬಲಿಪರು ಇಂದಿಗೂ ಅವಿಭಕ್ತ ಕುಟುಂಬದ ಹಿರಿಯರಾಗಿ ಸರಳ ಜೀವನ ನಡೆಸುತ್ತಿರುವ ಅವರ ಮಾರೂರಿನ ನೂಯಿಯ ಮನೆಯಂಗಳದಲ್ಲಿ 13 ಲಕ್ಷ ರೂ ವೆಚ್ಚದಲ್ಲಿ 900 ಚದರ ಅಡಿ ವಿಸ್ತಾರದ ಅಮೃತ ಭವನ ಶೇಣಿಯವರ ನಂತರ ಕಲಾವಿದರೊಬ್ಬರಿಗೆ ಸಲ್ಲುತ್ತಿರುವ ವಿಶೇಷ ಗೌರವ ಎಂದವರು ಹೇಳಿದರು.

ಗೆದ್ದಲು ಹಿಡಿದು ಹಾಳಾಗುತ್ತಿರುವ ಬಲಿಪರ ಸಂಗ್ರಹದಲ್ಲಿರುವ ಅನೇಕ ಸ್ಮರಣಿಕೆಗಳ ಸಂಗ್ರಹಾಲಯವಾಗಿ ಭವನ ಮೂಡಿ ಬರಲಿದ್ದು ಇಲ್ಲಿ ಬಲಿಪ ಪರಂಪರೆಯ ಚಿತ್ರಣ, ಬಲಿಪರಿಂದ ವಿದ್ವತ್ ಚಿಂತನೆಗೆ ಅವಕಾಶ ನೀಡುವ ಸಂಪೂರ್ಣ ಖಾಸಗೀ ವಾತಾವರಣ ರೂಪಿಸಲಾಗುವುದು. ಫೆ.1ರಂದು ಸಂಜೆ 4.15ಕ್ಕೆ ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ.ಅಭಯ ಚಂದ್ರ ಜೈನ್ ಅವರು ಹಿರಿಯ ಕಲಾ ಪೋಷಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಶ್ಯಾಮ ಭಟ್ ಉಪಸ್ಥಿತಿಯಲ್ಲಿ ಭವನ ಸಮರ್ಪಣೆ ನಡೆಯಲಿದೆ. ಅಂದು ಅಪರಾಹ್ನ 2ರಿಂದ ಪುತ್ತಿಗೆ ರಘುರಾಮ ಹೊಳ್ಳ, ಪಟ್ಲ ಸತೀಶ್ ಶೆಟ್ಟಿ, ಪ್ರಫುಲ್ಲ ಚಂದ್ರ ನೆಲ್ಯಾಡಿ, ಪುಂಡಿಕಾೈ ಗೋಪಾಲಕೃಷ್ಣ ಭಾಗವತ ಅವರ ಭಾಗವತಿಕೆ, ಹಿಮ್ಮೇಳದಲ್ಲಿ ಜನಾರ್ಧನ ತೋಳ್ಪಡಿತ್ತಾಯ, ಚಂದ್ರಶೇಖರ ಕೊಂಕಣಾಜೆ, ಎಂ.ದೇವಾನಂದ ಭಟ್ ಸಹಕರಿಸಲಿದ್ದಾರೆ ಎಂದರು. ಕಲಾಭಿಮಾನಿಗಳು, ಬಲಿಪರ ಅಭಿಮಾನಿಗಳು ನೀಡಿದ ದೇಣಿಗೆಯ ಪ್ರತೀ ಪೈಸೆಯೂ ಸದುಪಯೋಗವಾಗಿದೆ ಎಂದವರು ಸಂತಸ ವ್ಯಕ್ತಪಡಿಸಿದರು.

ಬಲಿಪ ಅಭಿಮಾನಿಗಳ ಸಹಕಾರದಿಂದ ಕೆಲಸ ಸುಲಭವಾಗಿದೆ. ಇನ್ನೂ ಸಹ ಆರ್ಥಿಕ ನೆರವಿನ ಅಗತ್ಯವಿದ್ದು ದಾನಿಗಳ ಸಹಕಾರ ನಿರೀಕ್ಷಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ ತಿಳಿಸಿದರು.

ಬಲ್ಲಿರೇನಯ್ಯ…?
ಮೂಲತಃ ಕಾಸರಗೋಡಿನ ಪಡ್ರೆಯವರಾದ ಬಲಿಪರು ಕಳೆದ ಮೂರುವರೆ ದಶಕಗಳಿಂದ ನೂಯಿಯಲ್ಲಿ ತಾವು ನೆಲೆಸಿ ಕೃಷಿ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದಾರೆ. ಅಜ್ಜನಿಂದ ಬಳುವಳಿಯಾಗಿ ಪಡೆದ ಯಕ್ಷಗಾನದ ಭಾಗವತಿಕೆಯಲ್ಲಿ ಆಸಕ್ತರಾಗಿ ಹದಿನೈದರ ಹರೆಯದಲ್ಲೇ ಭಾಗವತಿಕೆ ಶುರು ಮಾಡಿಕೊಂಡ ಬಲಿಪರು ಕಟೀಲು ಮೇಳವೊಂದರಲ್ಲೇ 35ಕ್ಕೂ ಅಧಿಕ ವರ್ಷದ ತಿರುಗಾಟ ಸೇರಿದಂತೆ ಕೂಡ್ಲು, ರೆಂಜಾಳ, ಮೂಲ್ಕಿ, ಭಗವತಿ, ಸಹಿತ ಅನೇಕ ಮೇಳಗಳಲ್ಲಿ ಕಲಾ ಸೇವೆ ಸಲ್ಲಿಸಿ 2001-02ರಲ್ಲಿ ಮೇಳದಲ್ಲಿ ಭಾಗವತರಾಗಿ ತಿರುಗಾಟದ ಸೇವೆಯಲ್ಲಿ ಸುವರ್ಣ ಮಹೋತ್ಸವ ಆಚರಿಸಿದ್ದಾರೆ. ತನ್ನ ಸಾರ್ಥಕ ಸುದೀರ್ಘ ಸೇವೆಯಲ್ಲಿ ಬಲಿಪರ ಸಾಧನೆ, ಅವರು ಪಡೆದಿರುವ ಅಸಂಖ್ಯಾತ ಸನ್ಮಾನಗಳು, ಅಮೂಲ್ಯ ಸ್ಮರಣಿಕೆಗಳು, ಬಲಿಪರ ಕೃತಿಗಳು, ಧ್ವನಿ ಸುರುಳಿಗಳು, ಮುದ್ರಿತ ಪ್ರಸಂಗಗಳು ಹೀಗೆ ಎಲ್ಲವನ್ನೂ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಅಭಿಮಾನಿಗಳ ಮನದಂಗಳದ ಬಲಿಪರ ಮನೆಯಂಗಳದಲ್ಲಿ ಅರಳಿರುವ ಈ ಭವನ ಮಹತ್ವದ್ದಾಗಿದೆ.

ಬಲಿಪ ಭಾಗವತ 75 ವರ್ಷದ ಸಂಭ್ರಮವನ್ನು ಸ್ಮರಣೀಯವಾಗಿಸಲು ಬಲಿಪ ಭಾಗವತ ಮಿತ್ರ ಮಂಡಳಿ 2014 ಜನವರಿ 16ರಂದು ಬಲಿಪ ಭವನಕ್ಕೆ ಶಿಲಾನ್ಯಾಸವನ್ನು ಮಾಡಿತು.
ಬಲಿಪರ ಮನೆಯಂಗಳದಲ್ಲೇ ನಿರ್ಮಾಣಗೊಳ್ಳುತ್ತಿರುವ `ಬಲಿಪ ಭವನ’ 1050 ಚದರ ಅಡಿ ವಿಸ್ತೀರ್ಣ ಹೊಂದಿದೆ. ಸಂಪೂರ್ಣ ಆರ್‍ಸಿಸಿಯಿಂದಲೇ ನಿರ್ಮಾಣವಾಗುತ್ತಿರುವ ಭವನಕ್ಕೆ 100 ಚದರ ಅಡಿ ವಿಸ್ತೀರ್ಣ ಆಕರ್ಷಕ ಮುಖಮಂಟಪವಿದೆ. ಮುಖಮಂಟಪದ ಎರಡೂ ಕಂಬಗಳಲ್ಲಿ ಯಕ್ಷಗಾನದ ಮುಖವರ್ಣಿ ಕೆತ್ತಲಾಗಿದೆ. ಬಲಿಪ ಭವನದ ಒಳಗೆ 600 ಚದರ ಅಡಿ ವಿಸ್ತೀರ್ಣದ ಹಾಲ್ ಇದೆ. ಇಲ್ಲಿ ಬಲಿಪರಿಗೆ ಸಂದಿರುವ ಸನ್ಮಾನ ಪತ್ರ, ಸ್ಮರಣಿಗೆಗಳನ್ನು ಇರಿಸಲು ಕಪಾಟುಗಳನ್ನು ಮಾಡಲಾಗಿದೆ. ಯಕ್ಷಗಾನ ಅಧ್ಯಯನಕ್ಕೆ ಹಾಗೂ ಬಲಿಪರನ್ನು ಸಂದರ್ಶಕರಿಗೆ ಈ ಹಾಲ್‍ನಲ್ಲೇ ಕುಳಿತು ಸಮಾಲೋಚನೆಗೆ ವ್ಯವಸ್ಥೆಯಿದೆ. ಹಾಲ್‍ಗೆ ಹತ್ತಿರವೇ ಬಲಿಪರಿಗೊಂದು ಕಚೇರಿ/ ವಿಶ್ರಾಂತಿ ಕೋಣೆಯನ್ನು ನಿರ್ಮಿಸಲಾಗಿದೆ. ಎರಡು ಶೌಚಾಲಯಗಳಿವೆ. ರಾಧಕೃಷ್ಣ ಬೊರ್ಕರ್ ಭವನದ ವಿನ್ಯಾಸಗಾರರಾಗಿದ್ದಾರೆ.

ಕುಟಂಬದಲ್ಲಿ ಹಿರಿಯ ತಲೆಮಾರಿನ ನೆನಪಿಗೆ ಮತ್ತು ಗೌರವಕ್ಕಾಗಿ ಅಜ್ಜನ ಹೆಸರನ್ನು ಮೊಮ್ಮಗನಿಗೆ ಇಡುವುದು ಸಂಪ್ರದಾಯ. ಬಲಿಪರೂ ತಮ್ಮ ಅಜ್ಜ ನಾರಾಯಣ ಭಾಗವತರ ಹೆಸರನ್ನಿಟ್ಟುಕೊಂಡೇ ಬೆಳೆದರು. ಅಜ್ಜ ನಾರಾಯಣ ಭಾಗವತರೋ ಯಕ್ಷಗಾನಕ್ಕೇ ತನ್ನ ಬದುಕನ್ನು ಮೀಸಲಿಟ್ಟ ಮಹಾನ್ ಪ್ರತಿಭೆ. ಅವರ ಗರಡಿಯಲ್ಲೇ ಆಕರ್ಷಿತರಾಗಿ ಬೆಳೆದ ಬಲಿಪರು ಸಾಧಿಸಿದ್ದು ಕಡಿಮೆಯೇನಲ್ಲ. ಅವರ ನಾಲ್ವರ ಪುತ್ರರಲ್ಲಿಯೂ ಭಾಗವತಿಕೆ, ಕಲಾ ಸೇವೆಯ ಒಲವಿದೆ. ಬಲಿಪರ ಮೊಮ್ಮಕಳ ಪೈಕಿ ಹೆಣ್ಣು ಮಕ್ಕಳೇ ಹುಟ್ಟಿ ಗಂಡಿಲ್ಲ ಎನ್ನುವ ಕೊರಗಿಗೆ ಪರಿಹಾರವಾಗಿ ಕಟೀಲು ದೇವಿಗೆ ಯಕ್ಷಗಾನದ ಹರಿಕೆ ಹೇಳಿಕೊಂಡಿದ್ದ ಬಲಿಪರಿಗೆ ಇಲ್ಲಿಯೂ ಫಲ ಸಿಕ್ಕಿತು. ಹಿರಿಯ ಮಗ ಮಾಧವ ಅವರ ಸುಪುತ್ರ ಸ್ವಸ್ತಿಕನಿಗೆ ನಾರಾಯಣ ಎಂದು ಹೆಸರಿಡಲಾಗಿದೆ. ಈ ಮೂಲಕ ಬಲಿಪ ‘ನಾರಾಯಣ’ರ ಪರಂಪರೆ ಕಲಾ ಸೇವೆಯಲ್ಲಿ ಮುನ್ನಡೆಯುತ್ತಿದೆ.
mbd_jan24_1 (4)

mbd_jan24_1 (1)

mbd_jan24_1 (2)

mbd_jan24_1 (3)

By suddi9

Leave a Reply

Your email address will not be published. Required fields are marked *