ಹೊಸದಿಲ್ಲಿ: ಹರಿಯಾಣದ ಹಿಸಾರ್ನಲ್ಲಿನ ಚರ್ಚ್ ಕೆಡಹಲಾದುದನ್ನು ಸಮರ್ಥಿಸಿಕೊಂಡಿರುವ ವಿಶ್ವ ಹಿಂದು ಪರಿಷತ್, ಕ್ರೈಸ್ತರು ವೆಟಿಕನ್ನಲ್ಲಿ ಹನುಮಾನ್ ದೇವಸ್ಥಾನವನ್ನು ನಿರ್ಮಿಸಲು ಅವಕಾಶ ಕೊಡುತ್ತಾರೇನು ಎಂದು ಪ್ರಶ್ನಿಸಿದೆ.
1857ರ ಸ್ವಾತಂತ್ರ್ಯ ಸಮರವನ್ನು ಧಾರ್ಮಿಕ ನೆಲೆಯಲ್ಲಿ ಕೈಗೊಳ್ಳಲಾದ ಕೋಮು ಸಮರವೆಂದು ಕರೆದ ವಿಎಚ್ಪಿ ಜಂಟಿ ಪ್ರದಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು, ಕ್ರೈಸ್ತರ ಒಂದೊಮ್ಮೆ ಮತಾಂತರವನ್ನು ನಿಲ್ಲಿಸದಿದ್ದರೆ ಅಂದಿನ ಕೋಮು ಸಮರದ ರೀತಿಯ ಸಮರವನ್ನೇ ಮತ್ತೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಶ್ಚಿಮ ಬಂಗಾಲದ ನಾದಿಯಾದಲ್ಲಿ ವೃದ್ಧ ನನ್ ಒಬ್ಬರ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರಕ್ಕೆ ಕೋಮು ಬಣ್ಣ ನೀಡುವ ಯತ್ನವು ಚರ್ಚ್ ನಡೆಸುತ್ತಿರುವ ಪಿತೂರಿಯಾಗಿದೆ ಎಂದು ಆರೋಪಿಸಿದ ಜೈನ್, ನನ್ಗಳ ಲೈಂಗಿಕ ಶೋಷಣೆಯು ಕ್ರೈಸ್ತ ಸಂಸ್ಕೃತಿಯಾಗಿದೆಯೇ ವಿನಾ ಹಿಂದುಗಳದ್ದಲ್ಲ ಎಂದು ಟೀಕಿಸಿದರು. ನನ್ಗಳ ಮೇಲಿನ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ಅತಂಕಪಟ್ಟಿರುವ ಪೋಪ್ ಅವರು ಇದನ್ನು ತಡೆಯುವುದಕ್ಕಾಗಿ ಸಲಿಂಗ ಕಾಮವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿಸಾರ್ ಮತ್ತು ನಾದಿಯಾ ಪ್ರಕರಣಗಳಲ್ಲಿ ಹಿಂದು ಸಮೂಹದ ಕೆಲವು ಸಣ್ಣ ಪುಟ್ಟ ಗುಂಪುಗಳು ಶಾಮೀಲಾಗಿರುವುದಾಗಿ ಆರೋಪಿಸಲಾಗುತ್ತಿದೆ. ಆದರೆ ಈ ಯಾವುದೇ ಪ್ರಕರಣಗಳಲ್ಲಿ ವಿಶ್ವಹಿಂದು ಪರಿಷತ್ ಯಾವುದೇ ರೀತಿಯಲ್ಲಿ ಶಾಮೀಲಾಗಿಲ್ಲ ಎಂಬುದನ್ನು ಈಗಾಗಲೇ ಅತ್ಯಂತ ಸ್ಪಷ್ಟ ಶಬ್ದಗಳಲಿ ಸ್ಪಷ್ಟಪಡಿಸಿದೆ ಎಂದು ಜೈನ್ ಹೇಳಿದರು.
ಹಿಸಾರ್ನಲ್ಲಿ ಚರ್ಚ್ ಕಟ್ಟಡ ಕೆಡಹಲಾದ ಬಗ್ಗೆ ಪ್ರತಿಕ್ರಿಯಿಸಿದ ಜೈನ್, ಹಿಸಾರ್ನಲ್ಲಿ ಕ್ರೈಸ್ತ ಸಮುದಾಯದವರೇ ಇಲ್ಲ. ಹಾಗಿರುವಾಗ ಅಲ್ಲಿ ಚರ್ಚ್ ಕಟ್ಟಡವನ್ನು ಯಾಕಾದರೂ ನಿರ್ಮಿಸಲಾಗುತ್ತಿದೆ. ವೆಟಿಕನ್ನಲ್ಲಿ ಹಿಂದುಗಳಿಗೆ ಹನುಮಾನ್ ದೇವಾಲಯವನ್ನು ನಿರ್ಮಿಸಲು ಬಿಡುತ್ತಾರೆಯೇ? ಒಂದೊಮ್ಮೆ ಅವರು ಬಿಡುವುದಾದರೂ ನಾವೂ ಅವರಿಗೆ ಭಾರತದಲ್ಲಿ ಚರ್ಚ್ ನಿರ್ಮಾಣಕ್ಕೆ ಜಾಗ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು.