ಕೋಲ್ಕತಾ: ಪ. ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 71 ವರ್ಷದ ವೃದ್ಧ ಕ್ರೈಸ್ತ ಸನ್ಯಾಸಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು 10 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ನಡುವೆ, ಕಾಮಾಂಧರಿಗೆ ಕ್ಷಮೆ ನೀಡುವಂತೆ ಅತ್ಯಾಚಾರಕ್ಕೆ ಒಳಗಾದ ಸನ್ಯಾಸಿನಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕಾನ್ವೆಂಟ್ ಶಾಲೆಯೊಂದಕ್ಕೆ ನುಗ್ಗಿ ಲೂಟಿ ನಡೆಸಿ, ವೃದ್ಧ ಸನ್ಯಾಸಿನಿ ಮಾನಭಂಗ ಮಾಡಿದ ಪ್ರಕರಣದಲ್ಲಿ ಏಳರಿಂದ ಎಂಟು ಮಂದಿ ಭಾಗಿಯಾಗಿದ್ದಾರೆ. ಕಾನ್ವೆಂಟ್ನಲ್ಲಿ ದೊರೆತ ಸಿಸಿಟೀವಿ ದೃಶ್ಯಗಳಲ್ಲಿರುವ ವ್ಯಕ್ತಿಗಳಿಗೂ ಬಂಧಿತ 10 ಮಂದಿಗೂ ಹೋಲಿಕೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಏತನ್ಮಧ್ಯೆ, “ಅತ್ಯಾಚಾರಕ್ಕೆ ಒಳಗಾದ ಸನ್ಯಾಸಿನಿಗೆ ತಮ್ಮ ಮೇಲೆ ನಡೆದ ದೌರ್ಜನ್ಯಕ್ಕಿಂತ ಶಾಲೆ, ಅದರಲ್ಲಿರುವ ಮಕ್ಕಳ ಭದ್ರತೆಯದ್ದೇ ಚಿಂತೆಯಾಗಿದೆ. ಅಲ್ಲದೆ, ಅತ್ಯಾಚಾರಿಗಳಿಗೆ ಕ್ಷಮೆ ನೀಡುವಂತೆ ಯೇಸು ಕ್ರಿಸ್ತನಲ್ಲಿ ಕಣ್ಣೀರಿಡುತ್ತಾ ಅವರು ಮೊರೆ ಇಡುತ್ತಿದ್ದಾರೆ. ಹೃದಯ ಒಡೆದಿದೆ ಎಂದು ಗೋಳಾಡುತ್ತಿದ್ದಾರೆ’ ಎಂದು ಅವರನ್ನು ಭೇಟಿ ಮಾಡಿದ ಸ್ಥಳೀಯರು ತಿಳಿಸಿದ್ದಾರೆ.
ಮಮತಾ ಭೇಟಿ ವೇಳೆ ಘೇರಾವ್: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ರೈಸ್ತ ಸನ್ಯಾಸಿನಿಯನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಕುಪಿತ ಜನರು ಕೆಲಕಾಲ ಮಮತಾ ಕಾರಿಗೆ ಮುತ್ತಿಗೆ ಹಾಕಿದರು.