ಮುಂಬ್ಯೆ: ಭಾಷೆ ಮತ್ತು ಗಡಿ ವಿಚಾರದಲ್ಲಿ ನಡೆಯುವ ಗಲಭೆಗಳಿಗೆ ಮಾಧ್ಯಮಗಳು ಹೆಚ್ಚಿನ ಪ್ರಾಶಸ್ತ್ಯ ನೀಡಬಾರದು. ಸಮಾಜಮುಖಿ ಚಿಂತನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ರಾಜ್ಯ ಮಾಧ್ಯಮ ಅಕೆಡಮಿ ಅಧ್ಯಕ್ಷ ಎಂ ಎ ಪೊನ್ನಪ್ಪ ಹೇಳಿದರು.
ಅವರು ಶನಿವಾರ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಬೆಂಗಳೂರು, ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮುಂಬಯಿ ಥಾಣೆಯ ಹೋಟೇಲ್ ಧೀರಜ್ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ 2015 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಹೊರನಾಡ ಕನ್ನಡಿಗರ ಭಾಷಾಭಿಮಾನ ಈ ಸಮಾವೇಶದ ಮೂಲಕ ವಿಶ್ವ ವ್ಯಾಪಿಯಾಗುವಂತೆ ಮಾಡಿದೆ. ಪ್ರಸ್ತುತ ವರ್ಷದಿಂದ ಮಾಧ್ಯಮ ಅಕೆಡಮಿ ಪ್ರಶಸ್ತಿಗಳಿಗೆ ಹೊರ ನಾಡಿನ ಕನ್ನಡ ಪತ್ರಕರ್ತರನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ಶಾಸಕ ಪ್ರತಾಪ್ ಸನರ್ ನಾಯಕ್ ಮಾತನಾಡಿ ಇಲ್ಲಿನ ಕನ್ನಡ ಪತ್ರಕರ್ತರುಕನ್ನಡ ಪ್ರೇಮದೊಂದಿಗೆ ಮಹಾರಾಷ್ಟ್ರವನ್ನು ಪ್ರೀತಿಸುತ್ತಿದ್ದಾರೆ. ಕರ್ನಾಟಕ ಮಾತೃಭೂಮಿಯಾದರೆ, ಮಹಾರಾಷ್ಟ್ರ ಅವರ ಕರ್ಮಭೂಮಿಯಾಗಿರುತ್ತದೆ. ಗಡಿ ವಿವಾದಗಳನ್ನು ಮೀರಿ ಈ ಕಾರ್ಯಕ್ರಮ ಆಯೋಜನೆಗೊಂಡಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದ ರುವಾರಿ ರೋನ್ಸ್ ಬಂಟ್ವಾಳ್ ದಂಪತಿಯನ್ನು ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ವಹಿಸಿದ್ದರು.
ಈ ಸಂದರ್ಭಉದ್ಯಮಿ ವಿವೇಕ್ ಶೆಟ್ಟಿ, ಎನ್ ಕೆ ಬಿಲ್ಲವ, ಶಿವರಾಮ ಭಂಡಾರಿ, ಶೇಖರ್ ಎಂ ಶೆಟ್ಟಿ, ಸುರೇಶ್ ಭಂಡಾರಿ, ಮೊದ್ದೀನ್ ಮುಂಡ್ಕೂರು, ಡಾ. ಸುನಿತಾ ಶೆಟ್ಟಿ, ಚಂದ್ರಕಾಂತ್ ಶಿಂದೆ,ಮುಂಬೈ ಮರಾಠಿ ಪತ್ರಕರ್ತರ ಸಂಘದ ಅಧ್ಯಕ್ಷ ದೇವದಾಸ್ ಎನ್ ಮಟ್ಟಾಳೆ, ಪತ್ರಕರ್ತ ಮನೋಹರ ಪ್ರಸಾದ್, ದಯಾಸಾಗರ ಚೌಟ ಉಪಸ್ಥಿತರಿದ್ದರು.
ಹರೀಶ್ ಹೆಜ್ಮಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದರು. ಪ್ರೇಮನಾಥ್ ವಂದಿಸಿದರು.
