ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಬೃಹತ್ ವಸ್ತ್ರಮಳಿಗೆಯೊಂದರ ಕಟ್ಟಡದ ಕೆಳಭಾಗದಲ್ಲಿ ತಂದಿರಿಸಲಾಗಿದ್ದ ಹೊಸ ಜನರೇಟರ್ ಕಳವಾಗಿರುವ ಘಟನೆ ಸೋಮವಾರ ನಡೆದಿದೆ.
ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ ಎರಡು ವರ್ಷಗಳಿಂದ ಮುಂಬೈ ಮೂಲದ ಮಲೈಕಾ ಸಂಸ್ಥೆಗೆ ಸೇರಿದ ಎಲೆಕ್ಟ್ರಾನಿಕ್ಸ್ ಮಳಿಗೆ ಆರಂಭಗೊಂಡಿದ್ದು, ಇದೀಗ ಪಕ್ಕದಲ್ಲೇ ನಿರ್ಮಾಣಗೊಂಡ ಹೊಸ ಕಟ್ಟಡವನ್ನು ಖರೀದಿಸಿ ಬೃಹತ್ ವಸ್ತ್ರ ಮಳಿಗೆ ಆರಂಭಿಸಲು ಭಾರೀ ಸಿದ್ಧತೆ ನಡೆಸುತಿದೆ.
ಇದೇ 17ರಂದು ಹವಾನಿಯಂತ್ರಿತ ‘ಮಲೈಕಾ ವಸ್ತ್ರಮಳಿಗೆ’ ಶುಭಾರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ರೂ 4ಲಕ್ಷ ಮೌಲ್ಯದ ಹೊಸ ಜೆನರೇಟರ್ ಖರೀದಿಸಿ ಕಟ್ಟಡ ಬಳಿ ತಂದಿರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಎಂದಿನಂತೆ ಎಲೆಕ್ಟ್ರಾನಿಕ್ಸ್ ಮಳಿಗೆ ತೆರೆಯಲು ಬಂದಿದ್ದ ವೇಳೆ ವಸ್ತ್ರಮಳಿಗೆ ಹೊಸ ಕಟ್ಟಡ ಬಳಿ ಇದ್ದ ಜೆನರೇಟರ್ ಕಳುವಾಗಿರುವ ವಿಷಯ ಅಲ್ಲಿನ ಸಿಬ್ಬಂದಿಗಳ ಗಮನಕ್ಕೆ ಬಂದ ಬಳಿಕ ದೂರು ಸಲ್ಲಿಸಿದ್ದಾರೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.