ಬಂಟ್ವಾಳ:ಬಂಟ್ವಾಳ ತಾಲ್ಲೂಕು ಮಾತ್ರವಲ್ಲದೆ ರಾಜ್ಯದ ಹಲವೆಡೆ ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ಮೊತ್ತದ ವಂಚನೆ ಮಾಡಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಆರೋಪಿಯನ್ನು ಪುಂಜಾಲಕಟ್ಟೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಬಿ.ಸಿ.ರೋಡ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಶನಿವಾರ ನಡೆದಿದೆ.
ಇಲ್ಲಿನ ಮಾವಿನಕಟ್ಟೆ ಶ್ರೀ ಲಕ್ಷ್ಮೀವೆಂಕಟರಮಣ ಯಜಮಾನ ಇಂಡಸ್ಟ್ರೀಸ್ ಎಂಬ ಉಪ್ಪಿನಕಾಯಿ ಮತ್ತು ಗೇರುಬೀಜ ಸಂಸ್ಕರಣಾ ಘಟಕಕ್ಕೆ ರೂ 1. 10 ಕೋಟಿ ಮೊತ್ತದ ವಂಚನೆ ಮಾಡಿರುವ ಬಗ್ಗೆ ಸಂಸ್ಥೆ ಮಾಲೀಕ ಟಿ.ವರದರಾಜ ಪೈ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಆರೋಪಿಯು ಇಂತಹ ದಂಧೆಗೆ ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಸಹಿತ ಹಲವು ಚಲನಚಿತ್ರ ನಟರ ಹೆಸರು ಹೇಳಿಕೊಂಡು ಟಿ.ವರದರಾಜ್ ಪೈ ಸಂಪರ್ಕ ಬೆಳೆಸಿಕೊಂಡಿದ್ದರು.

ಈತನು ಗ್ಲೋಬಲ್ ಟ್ರೇಡ್ ವೆಲ್ಪ್ರೈ ಲಿ. ಕಂಪೆನಿ ಮೂಲಕ ನೂರಾರು ಕೋಟಿ ಮೊತ್ತದ ರಪ್ತು ವ್ಯವಹಾರ ನಡೆಸುತ್ತಿದ್ದು, ಇದೇ ಕಂಪೆನಿಯ ಮೂಲಕ ಮಾವಿನಕಟ್ಟೆ ಯಜಮಾನ ಸಂಸ್ಥೆಗೆ ರೂ 21ಕೋಟಿ ಮೊತ್ತದ ವ್ಯವಹಾರ ನಡೆಸುವುದಾಗಿ ನಂಬಿಸಿದ್ದನು ಎನ್ನಲಾಗಿದೆ.
ಇದಕ್ಕಾಗಿ ಮೊದಲ ಕಂತು ರೂ 50 ಲಕ್ಷ ಮೊತ್ತವನ್ನು ಕಳೆದ 2014ರ ಏ.17ರಂದು ವಾಮದಪದವಿನ ಕೆನರಾ ಬ್ಯಾಂಕಿನಲ್ಲಿ ರೂ 40 ಮತ್ತು ರೂ 10ಲಕ್ಷ ಮೊತ್ತದ ಪ್ರತ್ಯೇಕ ಚೆಕ್ಕಿನ ಮೂಲಕ ಪಾವತಿಸಲಾಗಿತ್ತು.
ಎರಡನೇ ಕಂತನ್ನು ಕಳೆದ 2014ರ ಏ.21ರಂದು ಮತ್ತೆ ರೂ 15ಲಕ್ಷ ಹಾಗೂ 2014ರ ಮೇ.3ರಂದು ರೂ35ಲಕ್ಷ ಮೊತ್ತವನ್ನು ವೇಣೂರು ಸ್ಟೇಟ್ಬ್ಯಾಂಕ್ ಆಫ್ ಮೈಸೂರು ಶಾಖೆ ಮೂಲಕ ಪಾವತಿಸಲಾಗಿತ್ತು. ಆ ಬಳಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಯೋಜನವಾಗದಿರುವುದನ್ನು ಕಂಡು ಹಣ ವಾಪಾಸು ಕೇಳಿದಾಗ ಚೆಕ್ ಬೌನ್ಸ್ ಮಾಡಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದೇ ರೀತಿ ಬೆಂಗಳೂರಿನ ಗೋವರ್ಧನ ಕೆ. ಶೆಟ್ಟಿ ಎಂಬವರಿಗೆ ಉದ್ಯಮಕ್ಕೆ ಸಂಬಂಧಿಸಿದಂತೆ ರಪ್ತು ವ್ಯವಹಾರ ನಡೆಸಲು ಅಲ್ಲಿನ ಪರವಾನಿಗೆ ತೆಗೆಸಿಕೊಡುವುದಾಗಿ ತಿಳಿಸಿ ರೂ 55 ಲಕ್ಷ ವಂಚಿಸಿದ್ದಾರೆ. ಮುಂಬೈ ಉದ್ಯಮಿ ಸುಜಾತ ಪೂಂಜ ಎಂಬವರ ಕಂಪೆನಿಗೆ ರೂ 35 ಲಕ್ಷ, ಮಂಗಳೂರಿನ ಉದ್ಯಮಿ ಸುನಿಲ್ ಶೆಟ್ಟಿ ಎಂಬವರಿಗೆ ರೂ 60 ಲಕ್ಷ ಮೊತ್ತದ ಚೆಕ್ ಬೌನ್ಸ್ ಪ್ರಕರಣ, ತಮಿಳ್ನಾಡಿನ ಏಶಿಯನ್ ಟ್ರೇಡಿಂಗ್ ಕಂಪೆನಿ ಮಾಲೀಕ ಡಿ. ಚಂದ್ರಕುಮಾರ್ ಎಂಬವರಿಗೂ ವಂಚಿಸಿ ಟೋಪಿ ಹಾಕಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಂಧೆ ಹಿಂದೆ ಇನ್ನೂ ನಾಲ್ವರು ಆರೋಪಿಗಳಿದ್ದು, ಅವರು ಬೆನಾಮಿ ಕಂಪೆನಿ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಆರೋಪಿಗಳು ಅಸ್ಸಾಂ ಮೂಲದ ಸಿಮ್ ಕಾರ್ಡ್ಗಳನ್ನು ಮೊಬೈಲ್ ಸಂಪರ್ಕಕ್ಕೆ ಬಳಸುತ್ತಿದ್ದು, ಬಳಿಕ ಸಿಂಗಾಪುರಕ್ಕೆ ಕರೆ ಡೈವರ್ಟ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಬೆಳ್ತಂಗಡಿ ಇನ್ಸ್ಪೆಕ್ಟರ್ ಲಿಂಗಪ್ಪ ಪೂಜಾರಿ ನೇತೃತ್ವದ ಪೊಲೀಸರ ತಂಡವು ಬೆಂಗಳೂರಿನಲ್ಲಿ ಕಾಯರ್ಾಚರಣೆ ನಡೆಸಿ ಗುರುವಾರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಆತನನ್ನು ಭಾರೀ ವಿಚಾರಣೆಗೊಳಪಡಿಸಿದಾಗ ಈ ನಕಲಿ ದಂಧೆ ಬೆಳಕಿಗೆ ಬರಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.