ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ನ ಸ್ಥಾಪಕರ ದಿನಾಚರಣೆ ಪ್ರಯುಕ್ತ ಬ್ಯಾಂಕಿನ ಸ್ಥಾಪಕಾಧ್ಯಕ್ಷ ಸ್ವಾತಂತ್ರ್ಯ ಹೋರಾಟಗಾರ ದಿ.ಡಾ.ಅಮ್ಮೆಂಬಳ ಬಾಳಪ್ಪ ಇವರ ಪ್ರತಿಮೆ ಅನಾವರಣ ಮತ್ತು, ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮ ಇದೇ 24ರಂದು ಬೆಳಗ್ಗೆ ಬ್ಯಾಂಕಿನ ಸಹಕಾರಿ ಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದ್ದಾರೆ.
ಬಿ.ಸಿ.ರೋಡ್ನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ ಅವರು ಪ್ರತಿಮೆ ಅನಾವರಣಗೊಳಿಸುವರು ಎಂದರು. ಮಡಂತ್ಯಾರು ಸಮೀಪದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ರವಿ ಎನ್. ಬ್ಯಾಂಕಿನ ವೆಬ್ಸೈಟ್ ಬಿಡುಗಡೆಗೊಳಿಸಿ, ಉಡುಪಿ ಸರ್ಕಾರಿ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ಉಪನ್ಯಾಸಕ ಡಾ.ದುಗ್ಗಪ್ಪ ಕಜೆಕಾರ್, ಮಂಗಳೂರು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ ಬ್ಯಾಂಕಿನ ಏಳಿಗೆಗೆ ಶ್ರಮಿಸಿದ ಹಿರಿಯರನ್ನು ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕಳೆದ 34 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಬ್ಯಾಂಕು ಈಗಾಗಲೇ 9 ಶಾಖೆ ಮೂಲಕ ಒಟ್ಟು ರೂ 287 ಕೋಟಿಗೂ ಮಿಕ್ಕಿ ವ್ಯವವಹಾರ ನಡೆಸಿ ಸದಸ್ಯರಿಗೆ ಶೇ. 20ರಷ್ಟು ಲಾಭಾಂಶ ವಿತರಿಸಿದೆ. ಸುಮಾರು 40ಕ್ಕೂ ಮಿಕ್ಕಿ ಮಂದಿ ಸಿಬ್ಬಂದಿ ಹೊಂದಿದ್ದು, ಈ ಬಾರಿ ಒಟ್ಟು ರೂ 1.15 ಕೋಟಿಗೂ ಮಿಕ್ಕಿ ನಿವ್ವಳ ಲಾಭ ಗಳಿಸಿದೆ ಎಂದು ಅವರು ವಿವರಿಸಿದರು. ಬ್ಯಾಂಕಿನ ಉಪಾಧ್ಯಕ್ಷ ವಿಶ್ವನಾಥ ಕೆ.ಬಿ, ನಿರ್ದೇಶಕರಾದ ವಿಶ್ವನಾಥ್, ಅರುಣ್ ಕುಮಾರ್, ಪದ್ಮನಾಭ ವಿ, ಹೇಮಂತ್ ಸಾಲ್ಯಾನ್, ಲೋಕನಾಥ್ ಡಿ, ಜಯಂತಿ, ಪ್ರಧಾನ ವ್ಯವಸ್ಥಾಪಕ ಉಮೇಶ್.ಕೆ. ಸುದ್ದಿಗೋಷ್ಠಿಯಲ್ಲಿದ್ದರು.