ಬಂಟ್ವಾಳ: ಬಂಟ್ವಾಳ ತ್ಯಾಗರಾಜ ರಸ್ತೆಯಲ್ಲಿರುವ ಯಶವಂತ ವ್ಯಾಯಾಮ ಶಾಲೆಯಲ್ಲಿ ಕಳೆದ 75 ವರ್ಷಗಳ ಹಿಂದೆ ಸ್ಥಾಪನೆಗೊಂಡ ಶ್ರೀ ರಾಮಾಂಜನೆಯ ಭಜನಾ ಮಂಡಳಿ ಇದರ ‘ಅಮೃತೋತ್ಸವ’ ಪ್ರಯುಕ್ತ ಜೂ.17ರಿಂದ ಜು.16ರ ತನಕ ಆಷಾಡ ಮಾಸದ ಒಂದು ತಿಂಗಳು ‘ಭಜನೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಚರಣಾ ಸಮಿತಿ ಗೌರವಾಧ್ಯಕ್ಷ ಡಾ.ವಸಂತ ಬಾಳಿಗಾ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಲ್ಲಿನ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ವಠಾರದಲ್ಲಿ ಈ ‘ಭಜನೋತ್ಸವ’ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಾದ್ಯಂತ ಒಟ್ಟು 30ಕ್ಕೂ ಮಿಕ್ಕಿ ಭಜನಾ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಗೌಡ ಸಾರಸ್ವತ ಸಮಾಜದ ಭಜನಾ ಮಂಡಳಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಈಗಾಗಲೇ ಸುಮಾರು 15ಕ್ಕೂ ಮಿಕ್ಕಿ ಭಜನಾ ತಂಡಗಳು ಹೆಸರು ನೊಂದಾಯಿಸಿದೆ ಎಂದು ಅವರು ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ವಸಂತ ಪ್ರಭು, ಪ್ರಭಾಕರ ಪೈ, ಸತೀಶ್ ನಾಯಕ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.