ಬಂಟ್ವಾಳ:ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಚತುಷ್ಪತ ರಸ್ತೆಯಾಗಿ ಪರಿವರ್ತನೆಯಾಗುತ್ತಿದ್ದಂತೆಯೇ ಇಲ್ಲಿನ ಹೆದ್ದಾರಿ ಬಳಿ ವಾಸಿಸುತ್ತಿರುವ ನೂರಾರು ಮನೆಗಳಿಗೆ ಒಂದಿಲ್ಲೊಂದು ಆತಂಕ ಎದುರಾಗುತ್ತಿರುವುದು ಕಂಡು ಬಂದಿದೆ.


ಇಲ್ಲಿನ ಮಾರಿಪಳ್ಳ ರಾಷ್ಟ್ರೀಯ ಹೆದ್ದಾರಿ ಬಳಿ ಹಾದು ಹೋಗಿರುವ ಬೃಹತ್ ತೋಡಿನ ಮಾದರಿ ತೆರೆದ ಒಳಚರಂಡಿ ದುರ್ವಾಸನೆಯಿಂದ ಪರಿಸರವನ್ನೆಲ್ಲಾ ಕೆಡಿಸಿದ್ದಲ್ಲದೆ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿಯನ್ನೂ ಮೂಡಿಸಿದೆ. ಇದರಿಂದಾಗಿ ‘ಮಾರಿಪಳ್ಳ’ ಹೆಸರಿಗೆ ತಕ್ಕಂತೆ ಇಲ್ಲಿನ ‘ ಪಳ್ಳ”ವೂ (ಹಳ್ಳ) ಊರಿನ ಜನತೆಗೆ ಮಹಾ ‘ಮಾರಿ’ಯಾಗಿ ಕಾಡತೊಡಗಿದೆ ಎನ್ನುತ್ತಿದ್ದಾರೆ. ಈ ಪರಿಸರದಲ್ಲಿ ಪ್ರತಿನಿತ್ಯ ಮಕ್ಕಳು ಶಾಲೆಗೆ ಹೋಗುವ ಮತ್ತು ಬರುವ ವೇಳೆ ತೆರೆದ ಒಳಚರಂಡಿಗೆ ಬೀಳದಂತೆ ಕಾಯಲು ಮನೆಯಲ್ಲಿ ಯಾರಾದರೊಬ್ಬರು ಇರಲೇಬೇಕು. ಮಾತ್ರವಲ್ಲದೆ ಈ ಹೆದ್ದಾರಿಯಲ್ಲಿ ದಿನವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿದ್ದು, ಓವರ್ಟೇಕ್ ಭರದಲ್ಲಿ ತೆರೆದ ಚರಂಡಿಗೆ ಉರುಳಿ ಬೀಳುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಇಲ್ಲಿನ ವಾಹನ ಸವಾರರು.
ಪ್ರತಿದಿನ ಸಂಜೆಯಾಗುತ್ತಿದ್ದಂತೆಯೇ ನುಸಿ ಕಾಟ ವಿಪರೀತವಾಗಿದ್ದು, ಮಳೆಗಾಲದಲ್ಲಿ ಇಲ್ಲಿನ ಬಾವಿಗೂ ಇದೇ ಕೊಳಚೆ ನೀರಿನ ತ್ಯಾಜ್ಯ ಹರಿಯುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಪುದು ಗ್ರಾಮ ಪಂಚಾಯಿತಿಗೆ ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಸ್ಥಳೀಯರದ್ದು.
ಈ ಪ್ರದೇಶವು ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರವಾಗಿದ್ದು, ಇಲ್ಲಿನ ನಾಗರಿಕರಿಗೆ ಮಾತ್ರ ಈ ತೆರೆದ ಒಳಚರಂಡಿ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಸ್ವತಃ ಆರೋಗ್ಯ ಸಚಿವರ ತವರು ಕ್ಷೇತ್ರದಲ್ಲೇ ಜನತೆಗೆ ದುರ್ವಾಸನೆ ಮತ್ತು ಸಾಂಕ್ರಾಮಿಕ ಭೀತಿ ಎದುರಾಗಿರುವುದು ವಿಪರ್ಯಾಸವೇ ಸರಿ ಎನ್ನುತ್ತಿದ್ದಾರೆ ಇಲ್ಲಿನ ನಾಗರಿಕರು.
-ಚಿತ್ರ: ಎಂ.ಕೆ.ಶ್ರೀಯಾನ್ ರಾಯಿ